close

News WrapGet Handpicked Stories from our editors directly to your mailbox

ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪಗೆ ಸಿದ್ದರಾಮಯ್ಯ ಚಾಟಿ.

Yashaswini V Yashaswini V | Updated: Sep 18, 2019 , 05:38 PM IST
ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಹೇಳಿದ್ದಾರೆ.

ಹಳ್ಳಿಯಿಂದ ಬಂದವರಿಗೆ ಕೆಟ್ಟ ಭಾಷೆ, ಬೈಗುಳ ಬರುತ್ತದೆ. ಸಚಿವರಾದ ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ. ಸಾರ್ವಜನಿಕ ಜೀವನದಲ್ಲಿರಲು ಅವರು ನಾಲಾಯಕ್ ಎಂದು ಸಿದ್ದರಾಮಯ್ಯ ಅವರು ಸಚಿವ ಈಶ್ವರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಎರಡು ದಿನಗಳ ಹಿಂದೆ ಈಶ್ವರಪ್ಪ ನೀಡಿದ್ದ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಟ್ಟ ಭಾಷೆ ಬಳಸಲು ಎಲ್ಲರಿಗೂ ಬರುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಸಂಸದೀಯ ಭಾಷೆ ಬಳಸಬೇಕೇ ಹೊರತು ಕೆಟ್ಟ ಪದಗಳ ಪ್ರಯೋಗ ಮಾಡಬಾರದು. ಆಯ್ಕೆ ಮಾಡಿದ ಜನ ನಮ್ಮನ್ನು ನೋಡುತ್ತಿರುತ್ತಾರೆ. ಅವರು  ಏನು ಅಂದುಕೊಳ್ಳುತ್ತಾರೆ ಎಂಬುದೇ ಅವರಿಗೆ ತಿಳಿದಿಲ್ಲ ಎಂದರು.

ಈಶ್ವರಪ್ಪ ಅವರು ಮುಂದಾದರೂ ಸಂಸದೀಯ ಪದಗಳನ್ನು ಬಳಸಲಿ ಎಂದ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದವರು ಎನ್ನುತ್ತಾರೆ.  ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಳಸುವ ಭಾಷೆಯೇ ಇದು. ಅವರ ಹೇಳಿಕೆ ಖಂಡನೀಯ ಎಂದಿದ್ದಾರೆ.

ವಾಸ್ತವವಾಗಿ, ಭಾನುವಾರ ನಗರದ ಪುರವನದ ಸಭಾಂಗಣದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುತ್ತಿದ್ದ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ವತಿಯಿಂದ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಈಶ್ವರಪ್ಪ, ಯಾವ ಮುಸ್ಲಿಮರು ದೇಶಭಕ್ತರಾಗಿರುತ್ತಾರೋ ಅವರು ಬಿಜೆಪಿಗೆ ಮತ ಹಾಕುತ್ತಾರೆ. ಯಾರು ಪಾಕಿಸ್ತಾನದ ಪರವಾಗಿ ಇರುತ್ತಾರೋ ಅವರು ಬಿಜೆಪಿಗೆ ಓಟು ಹಾಕುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.