ನವದೆಹಲಿ: ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ಜಲ ಆಯೋಗವು ಕರ್ನಾಟಕ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಡಿಪಿಆರ್ ಸಿದ್ಧಪಡಿಸುವಾಗ ಕಾವೇರಿ ಕಣಿವೆಯ ಇತರೆ ರಾಜ್ಯಗಳ ಅಭಿಪ್ರಾಯವನ್ನೂ ಪರಿಗಣಿಸಬೇಕು. ಇದರಿಂದ ಅಂತರ್ ರಾಜ್ಯ ಜಲಸೌಹಾರ್ಧ ಸಾಧಿಸಬಹುದು. ಸಂಭವನೀಯ ಬಿಕ್ಕಟ್ಟು ಬಗೆಹರಿಸಬಹುದು ಎಂದೂ ಅವರು ಹೇಳಿದ್ದಾರೆ.
ರಾಜ್ಯದ ಸಂಸದರಾದ ಡಿ.ಕೆ. ಸುರೇಶ್ ಹಾಗೂ ನವೀನ್ ಕುಮಾರ್ ಕಟೀಲ್ ಅವರು, ಕರ್ನಾಟಕದ ಮೇಕೆದಾಟು ಯೋಜನೆಯ ಪ್ರಸ್ತುತ ಸ್ಥಿತಿ ಏನು, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶದ ಈ ಯೋಜನೆ ಅನುಷ್ಠಾನಕ್ಕೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆಯೇ, ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುದಾನವನ್ನೇನಾದರೂ ನೀಡುತ್ತಿದೆಯೇ? ಒಂದೊಮ್ಮೆ ನೀಡುತ್ತಿದ್ದರೆ ಅದರ ವಿವರ ಏನು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಪ್ರಶ್ನೆ ಕೇಳಿದ್ದರು.
ಕರ್ನಾಟಕದ ಸಂಸದರಾದ ಡಿ.ಕೆ. ಸುರೇಶ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ಅರ್ಜುನ್ ರಾಮ್ ಮೇಘವಾಲ್, 'ಕುಡಿಯುವ ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶದ ಮೇಕೆದಾಟು ಅಣೆಕಟ್ಟೆ ಯೋಜನೆ ಸಂಬಂಧ ಕರ್ನಾಟಕ ಸರ್ಕಾರವು ಸಾಧ್ಯತಾ ವರದಿಯನ್ನು (ಪೀಸಿಬಿಲಿಟಿ ರಿಪೋರ್ಟ್) ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸಲು ಅವಕಾಶ ನೀಡುವಂತೆಯೂ ಮನವಿ ಮಾಡಿಕೊಂಡಿತ್ತು. ಕೇಂದ್ರ ಜಲ ಆಯೋಗದ ಪರಿಶೀಲನಾ ಸಮಿತಿಯು ಕಳೆದ ಅಕ್ಟೋಬರ್ 24 ರಂದು ಕೆಲವು ಷರತ್ತುಗಳೊಂದಿಗೆ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಒಪ್ಪಿಗೆ ನೀಡಿದೆ' ಎಂದು ತಿಳಿಸಿದ್ದಾರೆ.
ಇನ್ನು ಕಾವೇರಿ ನೀರು ನಿರ್ವಹಣಾ ಮಂಡಳಿಯು ಒಪ್ಪಿರುವ ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದ ಕಾವೇರಿ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪು ಅನುಷ್ಠಾನಕ್ಕೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯು ಕರ್ನಾಟಕದ ಡಿಪಿಆರ್ ಅನ್ನು ಪರಿಗಣಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕವು ಸಾಧ್ಯತಾ ವರದಿಯಲ್ಲಿ ಮನವಿ ಮಾಡಿದೆ ಎಂದು ಅವರು ಉತ್ತರದಲ್ಲಿ ವಿವರಿಸಿದ್ದಾರೆ.