ಮಂಗಳೂರಿನಲ್ಲಿ ಇಂದು ಶಾಂತಿ ಸಭೆ: ನಗರದಲ್ಲಿ ಸೆಕ್ಷನ್ 144 ವಿಸ್ತರಣೆ

ಇಂದು‌ ಬೆಳಗ್ಗೆ 11 ಗಂಟೆ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರ ಸಮ್ಮುಖದಲ್ಲಿ ಕಚೇರಿಯಲ್ಲಿ ಶಾಂತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ. ಇನ್ನು ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ

Written by - Bhavishya Shetty | Last Updated : Jul 30, 2022, 09:22 AM IST
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಂತಿ ಸಭೆ
  • ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರ ಸಮ್ಮುಖದಲ್ಲಿ ನಡೆಯಲಿರುವ ಸಭೆ
  • ಉಂಟಾಗಿರುವ ಪ್ರಕ್ಷುಬ್ದತೆಯನ್ನು ತಣ್ಣಗಾಗಿಸುವ ಹಿನ್ನೆಲೆ ಈ ಕ್ರಮ
ಮಂಗಳೂರಿನಲ್ಲಿ ಇಂದು ಶಾಂತಿ ಸಭೆ: ನಗರದಲ್ಲಿ ಸೆಕ್ಷನ್ 144 ವಿಸ್ತರಣೆ title=
Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ಪ್ರಕ್ಷುಬ್ದತೆಯನ್ನು ತಣ್ಣಗಾಗಿಸುವ ಹಿನ್ನೆಲೆಯಲ್ಲಿ ಇಂದು ಶಾಂತಿ ಸಭೆಯನ್ನು ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕೇವಲ 10 ದಿನಗಳಲ್ಲಿ ಮೂರು ಹತ್ಯೆ ಪ್ರಕರಣಗಳು ದಾಖಲಾಗಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಿತ್ತು. 

ಇಂದು‌ ಬೆಳಗ್ಗೆ 11 ಗಂಟೆ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರ ಸಮ್ಮುಖದಲ್ಲಿ ಕಚೇರಿಯಲ್ಲಿ ಶಾಂತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ. ಇನ್ನು ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Vegetable Price: ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ! ದಿನೋಪಯೋಗಿ ತರಕಾರಿಗಳ ದರ ವಿವರ ಇಲ್ಲಿದೆ

ಸೆಕ್ಷನ್ 144 ವಿಸ್ತರಣೆ
ಮಂಗಳೂರು ನಗರದ ಸುರತ್ಕಲ್‌ನಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಿಷೇಧಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ. ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ  ನಿಷೇಧಾಜ್ಞೆಯನ್ನು ಆಗಸ್ಟ್ 1ರ ಬೆಳಗ್ಗೆ 8 ಗಂಟೆಯವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನಿಷೇಧಾಜ್ಞೆಯಲ್ಲಿ ಜಾರಿಯಲ್ಲಿರುವ ಎಲ್ಲಾ ನಿಯಮಗಳು ಆಗಸ್ಟ್ 1ರ ಬೆಳಗ್ಗಿನವರೆಗೂ ಮುಂದುವರಿಯಲಿದೆ. ಈ ಅವಧಿಯಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅನಗತ್ಯ ಸಂಚಾರ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಶಾಂತಿ ಕಾಪಾಡಲು ಸಹಕಾರ ನೀಡಬೇಕು ಎಂದು‌ ಪೊಲೀಸ್ ಇಲಾಖೆ ಮನವಿ ಮಾಡಿದೆ. 

ಅಂಗಡಿ, ಮುಂಗಟ್ಟುಗಳು ಬಂದ್‌: 
ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಜೆ 6 ಗಂಟೆಯಿಂದ ದ.ಕ. ಜಿಲ್ಲೆಯ ಎಲ್ಲಾ ಅಂಗಡಿ, ಮುಂಗಟ್ಟುಗಳು ಬಂದ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳಿಂದಾಗಿ ಪರಿಸ್ಥಿತಿ ಬೂದಿ ಮುಟ್ಟಿದ ಕೆಂಡದಂತಿದ್ದು, ಏನಾದರೂ ಸಮಸ್ಯೆಗಳು ಭುಗಿಲೆದ್ದರೆ ಅದು ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಗಸ್ಟ್ 1ರವರೆಗೆ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆ ಆದೇಶಗಳು ಹೀಗಿವೆ: 

1. ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಇತರೆ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಜಿಲ್ಲೆಯಾದ್ಯಂತ ಜು.29ರಿಂದ ಆ.1ರ ವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಬೇಕು

2. ಜಿಲ್ಲೆಯಾದ್ಯಂತ ಮಾಲ್, ಚಿತ್ರಮಂದಿರಗಳು/ಸಿನಿಮಾ ಹಾಲ್, ಪಬ್‌ಗಳನ್ನು ಜು.29ರಿಂದ ಆ.1ರ ವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಮುಚ್ಚುವುದು

3. ಸಾರ್ವಜನಿಕರು ಮತ್ತು ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಇನ್ನಾವುದೇ ಕಾರಣಗಳಿಗೆ ವಸತಿ ಸಮುಚ್ಚಯಗಳಿಂದ ಹೊರಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

4. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅವಶ್ಯಕವೆಂದು ಕಂಡುಬಂದಲ್ಲಿ ಮಾತ್ರ ಬಸ್ಸು, ಆಟೋರಿಕ್ಷಾ ಮತ್ತು ಟ್ಯಾಕ್ಸಿ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಮಾತ್ರ ವಾಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ.

5. ಅನಗತ್ಯ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ.

6. ಜಿಲ್ಲೆಯಲ್ಲಿ ಎಲ್ಲಾ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ, ಜಾತ್ರೆಗಳನ್ನು ಮುಂದೂಡಬೇಕು.

7. ಜಿಲ್ಲೆಯಲ್ಲಿ ಈಗಾಗಲೇ ನಿಗದಿಪಡಿಸಲಾಗಿರುವ ಖಾಸಗಿ ಸಮಾರಂಭಗಳನ್ನು ಮುಂದೂಡುವುದು.

8. ಹೋಟೆಲ್, ಪಾರ್ಸೆಲ್ ವ್ಯವಸ್ಥೆ, ತುರ್ತು ವ್ಯವಸ್ಥೆಗಳಿಗೆ ಮಾತ್ರ ಅವಕಾಶವಿರುತ್ತದೆ.

9. ಜಿಲ್ಲೆಯ ಎಲ್ಲಾ ಸಂಧ್ಯಾ ಕಾಲೇಜುಗಳಿಗೆ 2 ದಿನಗಳ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ʼಬಂಧಗಳ ಬೆಸೆಯುವ ಸ್ನೇಹಲೋಕʼ: ಈ ದಿನದ ಮಹತ್ವ ಇತಿಹಾಸವೇ ವಿಶೇಷ

ಮದ್ಯದಂಗಡಿ ಕ್ಲೋಸ್‌: 
ಆಗಸ್ಟ್‌ 1ರ ಬೆಳಗ್ಗೆ 8ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯದಂಗಡಿಗಳು ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ಎಲ್ಲಾ ವಿಧದ ಮದ್ಯ ಮಾರಾಟದ ಸನ್ನದುಗಳನ್ನು ಜುಲೈ 29 ರಿಂದ ಆಗಸ್ಟ್ 1ರ ಬೆಳಗ್ಗೆ 8 ಗಂಟೆಯವರೆಗೆ ಮುಚ್ಚಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News