ಹುಬ್ಬಳ್ಳಿ: ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಎರಡೂ ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಬಿಜೆಪಿಯ ಜನನಾಯಕ ಬಿ.ಎಸ್. ಯಡಿಯೂರಪ್ಪ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡದೇ ಇರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಅಲ್ಲಿಂದ ನಿರ್ಗಮಿಸಿದ ಅವರು, ತಮ್ಮ ಹಿಂದೆಯೇ ಕುಳಿತಿದ್ದ ಶಾಸಕ ಅಮೃತ್ ದೇಸಾಯಿ ಸೇರಿದಂತೆ ಕೆಲವು ನಾಯಕರಿಗೆ ಧನ್ಯವಾದ ತಿಳಿಸಿದರು. ಆದರೆ ಬಿ.ಎಸ್. ಯಡಿಯೂರಪ್ಪ ಕೈ ಮುಗಿದುಕೊಂಡು ನಿಂತಿದ್ದರೂ ಅವರನ್ನು ನೋಡಲಿಲ್ಲ. ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿ ಮುಂದೆ ಹೋದಂತಿತ್ತು ಪ್ರಧಾನಿ ಮೋದಿ ಅವರ ನಡೆ. ಸ್ವಲ್ಪವೇ ಮುಂದೆ ಬಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಕೈಮುಗಿದು ನಮಸ್ಕರಿಸಿ ವೇದಿಕೆಯಿಂದ ನಿರ್ಗಮಿಸಿದರು.
ಧಾರವಾಡದಿಂದ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಸಮೀಪ ಕೆಎಲ್‍ಇ ಮೈದಾನದ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ, ತಮ್ಮ ಬಗಿಲಲ್ಲೇ ಕುಳಿತಿದ್ದರೂ ಪ್ರಧಾನಿ ಮೋದಿ ಮಾತನಾಡಿಸಲಿಲ್ಲ. ಹಾರ ಹಾಕುವ ವೇಳೆ ಮಾತ್ರ ಥ್ಯಾಂಕ್ಸ್ ಹೇಳಿದರು. ಇದೆಲ್ಲದರ ಬಳಿಕ ಭಾಷಣದ ವೇಳೆಯೂ ಯಡಿಯೂರಪ್ಪ ಅವರ ಹೆಸರನ್ನು ಉಲ್ಲೇಖಿಸದೆ ಕಡೆಗಣನೆ ಮಾಡಿದರು.
ಈ ಎಲ್ಲಾ ಬೆಳವಣಿಗೆಗಳಿಂದ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಸೈಡ್‍ಲೈನ್ ಆದರೆ ಎನ್ನುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆಡಿಯೋ ಪ್ರಕರಣವನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಕ್ಕೆ ಪ್ರಧಾನಿ ಮೋದಿ ಫುಲ್ ಗರಂ ಆಗಿರಬಹುದು ಎಂದೂ ಚರ್ಚೆಯಾಗುತ್ತಿದೆ. ಎಷ್ಟೇ ಸಹಕಾರ, ಸಂಪನ್ಮೂಲ ನೀಡಿದರೂ ರಾಜ್ಯದಲ್ಲಿ ಸರ್ಕಾರ ರಚಿಸಲು ಯಡಿಯೂರಪ್ಪ ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ಮೋದಿ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಬಿಜೆಪಿ ನಾಯಕರಿಂದ ಕೇಳಿಬರುತ್ತಿವೆ.