ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಗಳಲ್ಲಂತೂ ಮೊಬೈಲ್ ಕಳ್ಳರನ್ನು ಹಿಡಿಯಲು ಪೊಲೀಸರು ಹರಸಾಹಸ ಮಾಡುವಂತಾಗಿದೆ. ಹೀಗೆ ಸಾರ್ವಜನಿಕರೊಬ್ಬರ ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರನ್ನು ಬೆನ್ನಟ್ಟಿ ಸೆರೆಹಿಡಿದ ಪೋಲಿಸ್ ಪೇದೆಗೆ ಆರಕ್ಷಕ ಇಲಾಖೆ ವಿಶೇಷ ಬಹುಮಾನ ನೀಡಿದೆ.
ಜುಲೈ 5 ರಂದು ಸರ್ಜಾಪುರ ರಸ್ತೆಯ ಬಿಗ್ ಬಜಾರ್ ಬಳಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಪ್ರಾಣದ ಹಂಗನ್ನೂ ತೊರೆದು ಬೆನ್ನಟ್ಟಿ ಹಿಡಿದ ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸ್ ಪೇದೆ ಕೆ.ಇ.ವೆಂಕಟೇಶ್(31) ಅವರ ಸಮಯಪ್ರಜ್ಞೆಯನ್ನು ಮೆಚ್ಚಿ ಪೋಲಿಸ್ ಇಲಾಖೆ ಬಹುಮಾನ ನೀಡಿದೆ.
ವೆಂಕಟೇಶ್ ಅವರಿಗೆ ಬಹುಮಾನವಾಗಿ 10 ಸಾವಿರ ನಗದು ಮತ್ತು ರಜೆ ಸಹಿತ ಹನಿಮೂನ್ ಪ್ಯಾಕೇಜ್ ನೀಡಲಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲಷ್ಟೇ ಮದುವೆಯಾಗಿದ್ದ ವೆಂಕಟೇಶ್ ಅವರನ್ನು ಕೇರಳಕ್ಕೆ ಹನಿಮೂನ್ ಪ್ಯಾಕೇಜ್ ನೀಡಿ ಕಳುಹಿಸಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.