ಬೆಂಗಳೂರಿನಲ್ಲಿ ಶೇ.1.6 ರಷ್ಟು ಪಾಸಿಟಿವಿಟಿ ರೇಟ್- ನಿತ್ಯವೂ 10 ಸಾವಿರ ಕೋವಿಡ್ ಟೆಸ್ಟ್

ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ.

Last Updated : May 7, 2022, 04:55 PM IST
  • ಕೋವಿಡ್ ಸೋಂಕಿನ‌ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯಕ್ಕನುಗುಣವಾಗಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ಬೆಂಗಳೂರಿನಲ್ಲಿ ಶೇ.1.6 ರಷ್ಟು ಪಾಸಿಟಿವಿಟಿ ರೇಟ್- ನಿತ್ಯವೂ 10 ಸಾವಿರ ಕೋವಿಡ್ ಟೆಸ್ಟ್ title=
file photo

ಬೆಂಗಳೂರು: ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಅದರಂತೆ ದಿನಕ್ಕೆ 10,000 ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ.  ಅಲ್ಲದೆ ಪ್ರಮುಖ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸಂಘ-ಸಂಸ್ಥೆಗಳ ಜೊತೆ ಸಭೆ ನಡೆಸಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಬಿಎಂಪಿ ನೂತನ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. 

ಮಳೆಗಾಲಕ್ಕೆ ಬಿಬಿಎಂಪಿ ಪೂರ್ವ ತಯಾರಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಮಳೆ ಬಂದ್ರೆ ಸಾಕು ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿ ಮಾಡಿಬಿಡುತ್ತೆ. ಹೀಗಾಗಿ ನಿನ್ನೆ ತಾನೆ ಅಧಿಕಾರ ಸ್ವೀಕರಿಸಿರುವ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರಗೆ ಇದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಕೂಡಲೇ ನಾಗರಿಕರಿಗೆ ಸ್ಪಂದಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

ಪಾಲಿಕೆಯ ಎಲ್ಲಾ ಹಿರಿಯ ಅಧಿಕಾರಿಗಳ ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದ ವೇಳೆ ಎಲ್ಲಾ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.ವಿಪತ್ತು ನಿರ್ವಹಣೆ ವೇಳೆ ಆಯಾ ವಲಯಗಳಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರೌವೃತ್ತರಾಗಿ ಕಾರ್ಯನಿರ್ವಹಿಸಬೇಕು.ಸ್ಥಳೀಯ ನಾಗರಿಕರಿಗೆ ಸೇವೆಗೆ ಎಲ್ಲಾ ಅಧಿಕಾರಿಗಳು ಸ್ಪಂದಿಸಬೇಕೆಂದು  ತಿಳಿಸಿದರು.

ಮಳೆಗಾಲಕ್ಕಾಗಿ 63 ನಿಯಂತ್ರಣ ಕೊಠಡಿಗಳು ಕೂಡಲೇ ಸ್ಥಾಪನೆ

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳು ಹಾಗೂ ಕೇಂದ್ರ ಕಛೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಮಳೆಗಾಲದ ವೇಳೆ ತಾತ್ಕಾಲಿಕವಾಗಿ ಸ್ಥಾಪಿಸುವ 63 ನಿಯಂತ್ರಣ ಕೊಠಡಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಯಂತ್ರೋಪಕರಣಗಳನ್ನು ವ್ಯವಸ್ಥೆ ಮಾಡಿಕೊಂಡು ಸಾರ್ವಜನಿಕರಿಂದ ದೂರುಗಳು ಬಂದ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮಳೆಯಿಂದಾಗಿ ತೊಂದರೆಗೆ ಒಳಪಡುವ ಅತೀ ಸೂಕ್ಷ ಪ್ರದೇಶಗಳನ್ನು ಗುರುತಿಸುವುದು ಹಾಗೂ ರಾಜಕಾಲುವೆಯಲ್ಲಿ ಹೂಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಸ್ತೆ ಬದಿಯ ಚರಂಡಿಗಳು ಹಾಗೂ ಶೋಲ್ಡರ್ ಡ್ರೈನ್ ಗಳನ್ನು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸುರಕ್ಷಾ ಪರಿಕರಣಗಳನ್ನು ಒದಗಿಸಬೇಕು. ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆದಾರರ ಮೇಲೆ ಸಮರ್ಪಕವಾಗಿ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಇರುವ ವ್ಯವಸ್ಥೆಯನ್ನು ಸರಿಪಡಿಸಬೇಕೊಂಡು ವ್ಯವಸ್ಥಿತವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಸೋಂಕು ಹೆಚ್ಚಿರುವ ಸ್ಥಳಗಳಲ್ಲಿ ಬಿಬಿಎಂಪಿ ಕಟ್ಟೆಚ್ಚರ

ನಗರದಲ್ಲಿ ಕೋವಿಡ್ ಪ್ರಕರಗಳು ನಿಯಂತ್ರಣದಲ್ಲಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಿರುವ ಪ್ರದೇಶದ ಮೇಲೆ ಹೆಚ್ಚು ನಿಗಾವಹಿಸಿ ಕೋವಿಡ್ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.ಸರ್ಕಾರ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಕೋವಿಡ್ ಸೋಂಕಿನ‌ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯಕ್ಕನುಗುಣವಾಗಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News