ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ ಸೇರಲಿರುವ 'ಪ್ರಗತಿ ಪ್ರತಿಮೆ'

ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸಲು ಮತ್ತು ಇದಕ್ಕಾಗಿ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ನಿರ್ಧರಿಸಿರುವ ರಾಜ್ಯ ಸರಕಾರವು ಇದಕ್ಕಾಗಿ 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

Written by - Zee Kannada News Desk | Last Updated : Sep 1, 2022, 09:58 AM IST
  • ಕೆಂಪೇಗೌಡರದ್ದು ಪ್ರಗತಿ ಪ್ರತಿಮೆ?
  • ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ 108 ಅಡಿಯ ಕೆಂಪೇಗೌಡರ ಪ್ರತಿಮೆ ಕೂಡ ಸೇರಲಿದ್ದು ಅದಕ್ಕೆ 'ಪ್ರಗತಿ ಪ್ರತಿಮೆ' (statue of prosperity) ಎಂದು ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ.
  • ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.
ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ ಸೇರಲಿರುವ 'ಪ್ರಗತಿ ಪ್ರತಿಮೆ' title=
file photo

ಬೆಂಗಳೂರು: ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸಲು ಮತ್ತು ಇದಕ್ಕಾಗಿ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ನಿರ್ಧರಿಸಿರುವ ರಾಜ್ಯ ಸರಕಾರವು ಇದಕ್ಕಾಗಿ 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಒಂದೆರಡು ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿರುವ ಸರಕಾರವು, ಇದಕ್ಕೆ ಪೂರ್ವಭಾವಿಯಾಗಿ 'ಉದ್ಘಾಟನಾ ಅಭಿಯಾನ'ವನ್ನು ನಡೆಸಲಿದೆ. ಸೆಪ್ಟೆಂಬರ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಹಸಿರು ನಿಶಾನೆ ಕಾಣಲಿರುವ ಅಭಿಯಾನವು ರಾಜ್ಯದ 31 ಜಿಲ್ಲೆಗಳಲ್ಲೂ ನಡೆಯಲಿದೆ.

ಇದನ್ನೂ ಓದಿ: Congress : ರಾಜ್ಯ ಕಾಂಗ್ರೆಸ್​ಗೆ​ ಬಿಗ್ ಶಾಕ್ : ಪಕ್ಷಕ್ಕೆ ನೀಡಿದ ರಾಜೀನಾಮೆ ಎಂಡಿಎಲ್

ರಾಜ್ಯ ಸರಕಾರವು ಪ್ರಧಾನಿ ನರೇಂದ್ರ ಮೋದಿಯವರ 'ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್' ಮಂತ್ರಘೋಷಕ್ಕೆ ತಕ್ಕಂತೆ ಎಲ್ಲ ಜನ ಸಮುದಾಯಗಳನ್ನೂ ಒಳಗೊಂಡು ನವಕರ್ನಾಟಕವನ್ನು ಕಟ್ಟಲು ಸಂಕಲ್ಪ ಮಾಡಿದೆ.ಇದಕ್ಕೆ ಪೂರಕವಾಗಿ ಅದು 'ನಾಡ ಕಟ್ಟೋಣ ಬನ್ನಿ'ಎನ್ನುವ ಘೋಷವಾಕ್ಯವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರೂಪಿಸಿದೆ. 

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ಹೀಗಾಗಿ, ಅವರ ಪ್ರತಿಮೆಯ ಉದ್ಘಾಟನೆಯಲ್ಲಿ ಇಡೀ ರಾಜ್ಯದ ಜನರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪಾಲ್ಗೊಳ್ಳಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಈ ಕನಸಿನೊಂದಿಗೆ ರೂಪು ಪಡೆದಿರುವ ಅಭಿಯಾನದ ಅಡಿಯಲ್ಲಿ ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮೃತ್ತಿಕೆ (ಮಣ್ಣು)ಯನ್ನು ಆಯಾಯಾ ಊರುಗಳಲ್ಲಿರುವ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ.ಇದಕ್ಕೆ ಮುಖ್ಯಮಂತ್ರಿ ಕೂಡ ಒಪ್ಪಿಗೆ ಸೂಚಿಸಿದ್ದು ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎನ್ನುವುದರ ಬಗ್ಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಗುರುವಾರದಂದೇ ಕಾರ್ಯ ಯೋಜನೆ ಹೊರಬೀಳುತ್ತದೆ.

ಇದನ್ನೂ ಓದಿ: Mangaluru : ಸೆ.2ರಂದು ಮಂಗಳೂರಿಗೆ ಪಿಎಂ ಮೋದಿ ಭೇಟಿ : ಭರ್ಜರಿ ಸಿದ್ದತೆಯಲ್ಲಿ ಜಿಲ್ಲಾಡಳಿತ

ಇದಕ್ಕಾಗಿ ಬೃಹತ್ ಎಲ್‌ಇಡಿ ಪರದೆಯನ್ನು ಅಳವಡಿಸಿರುವ ತಲಾ ಒಂದು ವಾಹನವನ್ನು ಪ್ರತೀ ಜಿಲ್ಲೆಗೂ ನಿಯೋಜಿಸಲಾಗುವುದು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮತ್ತು ಈ ಪರಿಕಲ್ಪನೆಯ ರೂವಾರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ನಾಡಿನ ಪ್ರಮುಖ ಸ್ವಾಮೀಜಿಗಳ ಸಂದೇಶಗಳು ಬಿತ್ತರವಾಗಲಿವೆ. ಜೊತೆಗೆ, ಕೆಂಪೇಗೌಡರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೂ ಪ್ರಸಾರವಾಗಲಿದ್ದು, ಜನರನ್ನು ಆಕರ್ಷಿಸಲಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಎಲ್ಲ ಜಿಲ್ಲೆಗಳಲ್ಲೂ ಇರುವ ಮಠಮಾನ್ಯಗಳ ಶ್ರೀಗಳು, ದೇವಸ್ಥಾನಗಳು, ಸ್ವಾತಂತ್ರ ಹೋರಾಟಗಾರರು, ತಾರಾ ವರ್ಚಸ್ಸಿನ ಸಾಧಕರನ್ನು ಕೂಡ ಒಳಗೊಳ್ಳಲು ರಾಜ್ಯ ಬಿಜೆಪಿ ಸರಕಾರವು ತೀರ್ಮಾನಿಸಿದೆ. ಒಟ್ಟಿನಲ್ಲಿ ಇದೊಂದು 'ಮೆಗಾ ಈವೆಂಟ್' ಆಗುವುದರಲ್ಲಿ ಅನುಮಾನವಿಲ್ಲ!

ರಾಜ್ಯ ಬಿಜೆಪಿ ಸರಕಾರವು ಮಾಡಿರುವ ಅಂದಾಜಿನ ಪ್ರಕಾರ, ಎಲ್ಲ ಹಳ್ಳಿಗಳಲ್ಲಿ ನಡೆಯಲಿರುವ 'ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ'ವು ಗಿನ್ನಿಸ್ ದಾಖಲೆಯಾಗಲಿದೆ. ಇಲ್ಲದಿದ್ದರೆ, ಈ ಅಭಿಯಾನ ನಡೆಯುವ ಒಂದೂವರೆ ತಿಂಗಳುದ್ದಕ್ಕೂ ರಾಜ್ಯದ 10 ಸಾವಿರ ದೇಗುಲಗಳಲ್ಲಿ ನಂದಾದೀಪಗಳು ಪ್ರಜ್ವಲಿಸಲಿದ್ದು, ಇದೂ ಗಿನ್ನಿಸ್ ದಾಖಲೆಯಾಗುವುದು ನಿಚ್ಚಳವಾಗಿದೆ. ಅಭಿಯಾನದ ಬಗ್ಗೆ ಭಾರೀ ಉತ್ಸಾಹದಿಂದಿರುವ ರಾಜ್ಯ ಸರಕಾರವು, ಆರಂಭದ ದಿನವಾದ ಸೆ.1ರ ಗುರುವಾರ ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಒಗ್ಗೂಡಿಸುವ ಒಲವಿನಲ್ಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ವಿಶ್ವಾಸ ರಾಜ್ಯ ಸರಕಾರದ್ದಾಗಿದೆ. ಇದಾದ ಬಳಿಕ, ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ತಲೆ ಎತ್ತುತ್ತಿರುವ ಕೆಂಪೇಗೌಡರ ಭವ್ಯವಾದ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸುವುದು ಅದರ ಸದುದ್ದೇಶವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News