ಇಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ

ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ನೇಗಿಲು ನೀಡುವ ಮೂಲಕ ನಾವಿಬ್ಬರೂ ರೈತಪರ ಎಂಬ ಸಂದೇಶ ರವಾನೆ ಮಾಡಲಿದ್ದಾರೆ.

Last Updated : Feb 27, 2018, 09:43 AM IST
ಇಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ title=

ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭಾರಿ ಅವರು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿರುವ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ದಾವಣಗೆರೆಯ ಜಿಎಂಐಟಿ ಕಾಲೇಜ್ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು. ಕಾಲೇಜಿನ ಸುತ್ತಮುತ್ತಲೂ ಬಿಗಿಯಾದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಸಂಚರಿಸುವ ರಸ್ತೆಗಳಲ್ಲಿ ಫ್ಲೇಕ್ಸ್​ಗಳನ್ನು ಹಾಕಲಾಗಿದೆ. ಸಂಜೆ 4 ಗಂಟೆಗೆ ದಾವಣಗೆರೆಗೆ ಆಗಮಿಸಲಿರುವ ಮೋದಿ, ನಂತರ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ನೇಗಿಲು ನೀಡುವ ಮೂಲಕ ನಾವಿಬ್ಬರೂ ರೈತಪರ ಎಂಬ ಸಂದೇಶ ರವಾನೆ ಮಾಡಲಿದ್ದಾರೆ. ಇದಕ್ಕಾಗಿ ಹೊನ್ನಳ್ಳಿಯ ಮಂಜುನಾಥ್ ಆಚಾರ್ಯ ಎನ್ನುವವರು ಮಾಡಿದ ನಾಲ್ಕು ಕೆ.ಜಿ. ತೂಕದ ತೇಗದ ನೇಗಿಲನ್ನು ಸಿದ್ದಪಡಿಸಿದ್ದಾರೆ.

ಬೆಂಗಳೂರಿನಂತೆ ಇಲ್ಲೂ ರೈತ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಪಣ ತೊಟ್ಟಿರುವ ಬಿಜೆಪಿ‌‌ ನಾಲ್ಕು ಲಕ್ಷ ಜನ ಸೇರಿಸುವ ಗುರಿ ಇಟ್ಟುಕೊಂಡಿದೆ. ಇದೇ ವೇಳೆ ಮುಂಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ರೈತರಿಗೆ ಏನೇನು ಕೊಡುಗೆ ನೀಡುತ್ತೇವೆ ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಮಾತನಾಡುವ ಸಾಧ್ಯತೆ ಇದೆ. ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಬಲ ತಂದುಕೊಟ್ಟಿರುವ ಅನ್ನಭಾಗ್ಯ ಯೋಜನೆಗೆ ಪ್ರತಿಯಾಗಿ ''ಮುಷ್ಠಿ ಅಕ್ಕಿ'' ಎನ್ನುವ ವಿನೂತನ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಅಭಿಯಾನದ ಮೂಲಕ ರಾಜ್ಯದ 6,028 ಗ್ರಾಮ ಪಂಚಾಯಿಗಳಲ್ಲಿ ರೈತರನ್ನು ಪಕ್ಷದತ್ತ ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.

ಈಗಾಗಲೇ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. ವೇದಿಕೆಯ ಮುಂಭಾಗ ಅಲಂಕಾರಿಕವಾಗಿ ಮೆಕ್ಕೆಜೋಳ ಹಾಗೂ ತರಕಾರಿಗಳನ್ನು ಕಟ್ಟಲಾಗಿದೆ.‌ ಕಾರ್ಯಕ್ರಮಕ್ಕೆ ವಿಶೇಷ ಭದ್ರತೆ ಮಾಡಲಾಗಿದ್ದು ದಾವಣಗೆರೆ ಸೇರಿದಂತೆ ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿಕ್ಕಮಂಗಳೂರು ಜಿಲ್ಲೆಗಳಿಂದ ಪೋಲಿಸರನ್ನು ಕರೆಸಿಕೊಳ್ಳಲಾಗಿದೆ.

ಮೋದಿ  ವೇಳಾಪಟ್ಟಿ

- ಮಧ್ಯಾಹ್ನ 12.30ಕ್ಕೆ ದೆಹಲಿಯಿಂದ‌‌ ಹೊರಡಲಿರುವ ಮೋದಿ
- ಮಧ್ಯಾಹ್ನ 2:55ಕ್ಕೆ ಹುಬ್ಬಳ್ಳಿ ವಿಮಾನ‌‌ ನಿಲ್ದಾಣಕ್ಕೆ ಆಗಮನ
- ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಯಿಂದ ದಾವಣಗೆರೆಗೆ ಆಗಮನ
- ಮಧ್ಯಾಹ್ನ 3.50ಕ್ಕೆ ದಾವಣಗೆರೆ ಆಗಮಿಸಲಿರುವ ಮೋದಿ
- ಸಂಜೆ 4ರಿಂದ 5ಗಂಟೆವರೆಗೆ ರೈತ ಸಮಾವೇಶದಲ್ಲಿ ಭಾಗಿ
- ಸಂಜೆ 5.15ಕ್ಕೆ ದಾವಣಗೆರೆಯಿಂದ ಹುಬ್ಬಳ್ಳಿಗೆ ಪ್ರಯಾಣ
- ಸಂಜೆ 6.10 ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ

Trending News