ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಸೇರಿದಂತೆ ಅವರ ಕುಟುಂಬದ ಒಟ್ಟು 51 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರ ಕುಟುಂಬಕ್ಕೆ ಈಗ ಅಸಲಿ ಕಂಟಕ ಶುರುವಾದಂತಾಗಿದೆ.
ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವ ಜಾರಿ ನಿರ್ದೇಶನಾಲಯವು ಗೌರಮ್ಮ ಮತ್ತು ಉಷಾ ಅವರಿಗೆ ಅಕ್ಟೋಬರ್ 17ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದೆ. ಗೌರಮ್ಮ ಅವರಿಗೆ ಅವರ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಉಷಾ ಅವರಿಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮನೆ (ಡಿ.ಕೆ. ಶಿವಕುಮಾರ್ ಮನೆ)ಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು ಕಳೆದ 26 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದಾರೆ. ಈಗಾಗಲೇ ಅವರ ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್, ಪುತ್ರಿ ಐಶ್ವರ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಉದ್ಯಮದ ಪಾಲುದಾರರಾದ ಸುನಿಲ್ ಕುಮಾರ್ ಶರ್ಮಾ, ಸಚಿನ್ ನಾರಾಯಣ್, ದೆಹಲಿ ಆಪ್ತ ಸಹಾಯಕ ಆಂಜನೇಯ, ಡ್ರೈವರ್ ರಾಜೇಂದ್ರ ವರ್ಮಾ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಸೇರಿ ಉಷಾ ಸೇರಿ ಕುಟುಂಬದ ಒಟ್ಟು 51 ಜನಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಒಟ್ಟೊಟ್ಟಿಗೆ ಇಷ್ಟು ಜನಕ್ಕೆ ವಿಚಾರಣೆಗೆ ಕರೆದಿರುವುದು ಕುತೂಹಲ ಉಂಟುಮಾಡಿದೆ. ಜೊತೆಗೆ ಸದ್ಯ ದೆಹಲಿ ಹೈಕೋರ್ಟಿನಿಂದ ಜಾಮೀನು ನಿರೀಕ್ಷೆಯಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅದು ಸಾಧ್ಯವಾಗದ ಸಂಗತಿ ಆಗಬಹುದಾಗಿದೆ.
ತಾಯಿ ಗೌರಮ್ಮ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, 'ಅವರಿಗೆ ಸಮನ್ಸ್ ಬಂದಿದೆ ಎಂದು ಗೊತ್ತಾಗಿದೆ. ವಯಸ್ಸಾಗಿರುವ ಕಾರಣದಿಂದ ಅವರು ದೆಹಲಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ' ಎಂದರು.