ನೆರೆ ಪೀಡಿತರನ್ನು ಸರ್ಕಾರ ಬೀದಿಪಾಲು ಮಾಡಿದೆ: ಸಿದ್ದರಾಮಯ್ಯ ಕಿಡಿ

ಪುನರ್ವಸತಿ ಕೇಂದ್ರಗಳನ್ನು ಮುಚ್ಚುವ ಮೂಲಕ ಸಂತ್ರಸ್ತರನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Last Updated : Oct 1, 2019, 02:38 PM IST
ನೆರೆ ಪೀಡಿತರನ್ನು ಸರ್ಕಾರ ಬೀದಿಪಾಲು ಮಾಡಿದೆ: ಸಿದ್ದರಾಮಯ್ಯ ಕಿಡಿ title=

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಮುಚ್ಚುವ ಮೂಲಕ ಸಂತ್ರಸ್ತರನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಈ ಬಗ್ಗೆ #KarnatakaNeedJustice ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರವಾಹದಿಂದ ಸಂಪೂರ್ಣ ಬೆಳೆ ನಷ್ಟ ಸಂಭವಿಸಿದೆ. ಬಿತ್ತನೆಗೆ ಸಾಲ ಪಡೆದ ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ. ಅಂತಹ ರೈತರನ್ನು ಗುರುತಿಸಿ, ಸರ್ಕಾರ ಅವರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಯಡಿಯೂರಪ್ಪನವರು ಪ್ರವಾಹದಿಂದ ಸಂಪೂರ್ಣ ಮನೆ ಹಾನಿಗೀಡಾಗಿದ್ದರೆ ರೂ.5 ಲಕ್ಷ, ಶೇ.75 ಹಾನಿಗೀಡಾಗಿದ್ದರೆ ರೂ.1 ಲಕ್ಷ, ಶೇ.25 ಹಾನಿಗೀಡಾಗಿದ್ದರೆ ರೂ.25,000 ನೀಡುವುದಾಗಿ ಘೋಷಿಸಿ ಸಾಕಷ್ಟು ಪ್ರಚಾರ ಪಡೆದರೇ ಹೊರತು ಇದುವರೆಗೂ ಸಂತ್ರಸ್ತರಿಗೆ ನಯಾಪೈಸೆ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ನಿಲ್ಲಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಯೋಜನೆಗೆ ಅನುದಾನ ನೀಡಿಲ್ಲ, ಪ್ರವಾಹದಿಂದ ಉದ್ಯೋಗವಿಲ್ಲದೆ ಕಂಗಾಲಾದವರಿಗೆ ಉದ್ಯೋಗ ನೀಡಿದ್ದರೆ ಅವರ ಬದುಕಿಗೆ ಆಸರೆಯಾಗುತ್ತಿತ್ತು. ಆದರೆ ಸರ್ಕಾರ ಯೋಜನೆಯನ್ನೇ ಸ್ಥಗಿತಗೊಳಿಸುವ ಇರಾದೆ ಹೊಂದಿದಂತಿದೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Trending News