ಕಣ್ಣೀರು ಹಾಕ್ಬೇಡಿ, ನಿಮ್ಮ ಪಕ್ಷದವರೇ ಬರೆದ ಪುಸ್ತಕ ಓದಿ: ರೆಡ್ಡಿಗೆ ಸಿದ್ದು ತಿರುಗೇಟು

ಅಕ್ರಮ ಗಣಿಗಾರಿಕೆ ಸುಳ್ಳು ಆರೋಪ ಹೊರಿಸಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ಕಳುಹಿಸಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

Last Updated : Oct 29, 2018, 02:39 PM IST
ಕಣ್ಣೀರು ಹಾಕ್ಬೇಡಿ, ನಿಮ್ಮ ಪಕ್ಷದವರೇ ಬರೆದ ಪುಸ್ತಕ ಓದಿ: ರೆಡ್ಡಿಗೆ ಸಿದ್ದು ತಿರುಗೇಟು title=

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಅಕ್ರಮ ಗಣಿಗಾರಿಕೆ ಸುಳ್ಳು ಆರೋಪ ಹೊರಿಸಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ಕಳುಹಿಸಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಜನಾರ್ಧನ ರೆಡ್ಡಿ ಹೇಳಿಕೆಗೆ ಟ್ವಿಟ್ಟರ್ ಮತ್ತು ಫೇಸ್ಬುಕ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಬರೆದಿರುವ 'ಮೈನಿಂಗ್ ಮಾಫಿಯಾ' ಪುಟಕ ಟ್ಯಾಗ್ ಮಾಡುವ ಮೂಲಕ "ಸಿದ್ದರಾಮಯ್ಯ ತನ್ನನ್ನು ಅನ್ಯಾಯವಾಗಿ ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಶ್ರೀಯುತ ಜನಾರ್ಧನ ರೆಡ್ಡಿಯವರೇ, ದಯವಿಟ್ಟು ನಿಮ್ಮ‌ದೇ ಪಕ್ಷದ ಸಂಸದರು ಬರೆದಿರುವ ಈ ಪುಸ್ತಕವನ್ನೊಮ್ಮೆ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತದೆ" ಎಂದು ತಿರುಗೇಟು ನೀಡಿದ್ದಾರೆ. 

ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಜನಾರ್ಧನ ರೆಡ್ಡಿ ಅವರು, ನಮ್ಮ ಕುಟುಂಬ ಹಾಗೂ ಶ್ರೀರಾಮುಲು ಕುಟುಂಬದವರಿಗೆ ಸಿದ್ದರಾಮಯ್ಯ ಕೊಡಬಾರದ ಕಾಟ ಕೊಟ್ಟರು. ಅಕ್ರಮ ಗಣಿಗಾರಿಕೆ ನೆಪದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ರೆಡ್ಡಿ ಕುಟುಂಬ ಅಕ್ರಮ ಗಣಿಗಾರಿಕೆ ನಡೆಸಿ ಒಂದು ಲಕ್ಷ ಕೋಟಿ ಹಣ ಲೂಟಿ ಮಾಡಿದೆ. ಅದನ್ನು ವಾಪಸ್ ತರುತ್ತೇವೆ ಎಂದು ಪ್ರಚಾರ ಮಾಡಿದರು. ನನ್ನನ್ನ ನಾಲ್ಕು ವರ್ಷ ಜೈಲಿನಲ್ಲಿಟ್ಟು ನನ್ನ ಜೀವನ ಹಾಳು ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
 

Trending News