ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ರಂಗೇರಿದೆ. ರಾಜ್ಯದಲ್ಲಿ ದೋಸ್ತಿ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿದ್ದು ಎಲ್ಲೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿವೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪರ್ಧಿಸುತ್ತಿದ್ದು, ಇವರ ಪರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇಂದು ಮತಯಾಚನೆ ಮಾಡಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ತಿಪಟೂರಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಈ ಇಬ್ಬರು ನಾಯಕರು ಭಾಗಿಯಾಗಲಿದ್ದು, ಇಡೀ ದಿನ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳಿಕ ಚಿಕ್ಕನಾಯಕನಹಳ್ಳಿ, ಮಧುಗಿರಿ ಕ್ಷೇತ್ರದಲ್ಲಿ ಚುನಾವಣಾ ಸಭೆ ನಡೆಸಲಿದ್ದಾರೆ. ಪ್ರಚಾರ ಸಭೆಗೆ ಕಾಂಗ್ರೆಸ್ ಅತೃಪ್ತ ನಾಯಕರಾದ ಮುದ್ದಹನುಮೇಗೌಡ ಹಾಗೂ ಕೆ.ಎನ್ ರಾಜಣ್ಣ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.