"ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ"

ಆಗಸ್ಟ್ 1: ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ 'ಗೃಹ ಜ್ಯೋತಿ' ಯೋಜನೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಕಲಬುರಗಿಯಲ್ಲಿ ಶನಿವಾರ  ಚಾಲನೆ ನೀಡಿದರು.

Written by - Manjunath N | Last Updated : Aug 5, 2023, 04:10 PM IST
  • ಕಲಬುರಗಿಯಲ್ಲಿ 'ಗೃಹ ಜ್ಯೋತಿ'ಗೆ ಸಿಎಂ ಚಾಲನೆ
  • 5 ಎಸ್ಕಾಂಗಳ ಒಟ್ಟು ಫಲಾನುಭವಿಗಳು 1.42 ಕೋಟಿ
  • ಆಗಸ್ಟ್ 1ರಿಂದ ವಿತರಿಸಿರುವ ಶೂನ್ಯ ಬಿಲ್‌ಗಳು 14.5 ಲಕ್ಷ
"ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ" title=
file photo

ಕಲಬುರಗಿ: ಆಗಸ್ಟ್ 1: ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ 'ಗೃಹ ಜ್ಯೋತಿ' ಯೋಜನೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಕಲಬುರಗಿಯಲ್ಲಿ ಶನಿವಾರ  ಚಾಲನೆ ನೀಡಿದರು.

ಇಲ್ಲಿನ ಎನ್‌ವಿ ಮೈದಾನದಲ್ಲಿ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ದರದ ವಿದ್ಯುತ್ ಬಿಲ್ ನೀಡಿ ಬಹುನಿರೀಕ್ಷಿತ 'ಗೃಹ ಜ್ಯೋತಿ'ಯೋಜನೆಗೆ ಚಾಲನೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

"ಇದು ಐತಿಹಾಸಿಕ ದಿನ. ಜ್ಯೋತಿಯನ್ನು ಬೆಳಗುವ ಮೂಲಕ ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ನೀಡಿದ್ದೆವು. ಅದಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ರುಜು ಮಾಡಿದ್ದೆವು. ಹಿಂದೆ ನಾವು 2013-18ರಲ್ಲಿ ಅಧಿಕಾರದಲ್ಲಿದ್ದಾಗ ಕೊಟ್ಟ ಮಾತನ್ನು ಈಡೇರಿಸಿದ್ದೆವು, ಅದಕ್ಕೆ ಜನ ನಮ್ಮ ಮಾತು ನಂಬಿ, ಮತ ನೀಡಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ,"ಎಂದು ಮುಖ್ಯಮಂತ್ರಿ ಹೇಳಿದರು. 

ಇದನ್ನೂ ಓದಿ: 2 ಸಾವಿರ ರೂಪಾಯಿ ಹಣಕ್ಕಾಗಿ ಅರ್ಜಿ ಸಲ್ಲಿಸಲು ದುಡ್ಡು!

"ನಾವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲಿ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನವನ್ನೂ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಅವರು ಹೇಳಿರುವಂತೆ, ಯೋಜನೆಗಳನ್ನು ಜಾರಿ ತಂದು ನಾವು ದಿವಾಳಿ ಆಗುವುದಿಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ರಾಜ್ಯ ದಿವಾಳಿ ಆಗಿ, ನಿರುದ್ಯೋಗ ಸಮಸ್ಯೆ ಹೆಚ್ಚಿತ್ತು. ಈಗ ನಾವು ಜಾರಿಗೊಳಿಸಿರುವಂಥ ಗ್ಯಾರಂಟಿಗಳನ್ನು ಇಡೀ ದೇಶದಲ್ಲಿ ಜಾರಿ ತನ್ನಿ ಎಂದು ಪ್ರಧಾನಿಗೆ ಸವಾಲು ಹಾಕುತ್ತೇನೆ. ಗುಜರಾತ್‌ ಮಾಡಲ್ ಎಂದು ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ, ನಮ್ಮ ರಾಜ್ಯವನ್ನು ಗುಜರಾತ್ ಮಾಡಲು ನಾವು ಬಿಡುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾಡಲ್ ಮಾಡಿದ್ದೇವೆ. ನುಡಿದಂತೆ ನಡೆಯುವುದೇ ಕರ್ನಾಟಕ ಮಾಡಲ್,"ಎಂದರು.

ಉಚಿತ ಬೆಳಕು, ಸುಸ್ಥಿರ ಬದುಕು: 
"ಭಾರತ್ ಜೋಡೋ ಯಾತ್ರೆ ವೇಳೆ ನಾಡಿನ ಜನ ಸಂಕಷ್ಟ ಅರಿತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ 5 ಗ್ಯಾರಂಟಿ ಕೊಟ್ಟೆವು. ಅಂದು ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನಮ್ಮ ಯೋಜನೆಗಳು ನೆಮ್ಮದಿ ತಂದಿವೆ," ಎಂದು ಇಂಧನ ಸಚಿವ ಜಾರ್ಜ್‌ ಹೇಳಿದರು. 

"ಉಚಿತ ವಿದ್ಯುತ್‌ ಯೋಜನೆಯಿಂದ ಹಲವಾರು ಲಾಭಗಳಿವೆ. ತಮ್ಮ ಉಳಿತಾಯದ ಹಣವನ್ನು ಜನ ಶಿಕ್ಷಣ, ಆರೋಗ್ಯಕ್ಕೆ ಬಳಸುತ್ತಾರೆ. ಹೆಚ್ಚಿನ ಜನ ಶಿಕ್ಷಿತರಾಗಿ ನಿರುದ್ಯೋಗ ಸಮಸ್ಯೆಯೂ ನೀಗುತ್ತದೆ, ತೆರಿಗೆ ಕಟ್ಟುವವರ ಸಂಖ್ಯೆಯೂ ಹೆಚ್ಚುತ್ತದೆ. ಇದೆಲ್ಲದರ ಮೂಲಕ ಸಾಮಾಜಿಕ ಆರ್ಥಿಕ ಪ್ರಗತಿಯಾಗಿ, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುವುದು,"ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಜಾರಿ: ಕಲಬುರಗಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ

ರಾಜ್ಯಸಭೆಯ ಪತ್ರಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇಂಧನ ಸಚಿವ ಕೆ.ಜೆ ಜಾರ್ಜ್ ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಪೌರಾಡಳಿತ ಸಚಿವ ರಹೀಂಖಾನ್, ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪಂಂಕಜ್ ಕುಮಾರ್ ಪಾಂಡೆ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

1.42 ಕೋಟಿ ಫಲಾನುಭವಿಗಳು
ಜುಲೈ 25ರವರೆಗೆ 5 ಎಸ್ಕಾಂಗಳ ಒಟ್ಟು 1.42 ಕೋಟಿ ಫಲಾನುಭವಿಗಳು ಯೋಜನೆಗೆ ನೋಂದಣಿಯಾಗಿದ್ದಾರೆ. ಈ ಪೈಕಿ ಸುಮಾರು 18 ಲಕ್ಷ ಮಂದಿ 'ಭಾಗ್ಯ ಜ್ಯೋತಿ', 'ಕುಟೀರ ಜ್ಯೋತಿ' ಮತ್ತು 'ಅಮೃತ್ ಜ್ಯೋತಿ'ಯಂತಹ ಹಾಲಿ ಯೋಜನೆಗಳ ಫಲಾನುಭವಿಗಳು ಸೇರಿದ್ದಾರೆ.

ಆಗಸ್ಟ್ 1ರಿಂದ ಇಂಧನ ಇಲಾಖೆಯು ಸರಿಸುಮಾರು 24,00,000 ವಿದ್ಯುತ್ ಬಿಲ್‌ಗಳನ್ನು ವಿತರಿಸಿದ್ದು, ಅದರಲ್ಲಿ  14.5 ಲಕ್ಷ ಒಟ್ಟು ಶೂನ್ಯ ಬಿಲ್‌ಗಳು.ಅಂದರೆ, ಇದು ಒಟ್ಟು ಬಿಲ್‌ಗಳ ಶೇ.60 ರಷ್ಟು. ಉಳಿದ 40% ಗ್ರಾಹಕರು ತಮ್ಮ ಮಾಸಿಕ ವಿದ್ಯುತ್ ಬಿಲ್‌ಗಳಿಗೆ ಅಲ್ಪ ಮೊತ್ತವನ್ನು ಪಾವತಿಸುವ ಮೂಲಕ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಜುಲೈ 27ರ ಮೊದಲು ಅರ್ಜಿ ಸಲ್ಲಿಸಿದವರು ಮಾತ್ರ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‌ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟೆಂಬರ್‌ನ ಬಿಲ್ಲಿಂಗ್‌ನಲ್ಲಿ ಪ್ರಯೋಜನ ಪಡೆಯುತ್ತಾರೆ. ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಘೋಷಿಸಿಲ್ಲ. 

ಸರಾಸರಿ ಬಳಸುವ ಯೂನಿಟ್‌ ವಿದ್ಯುತ್ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಮನೆಯ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸರಾಸರಿಗಿಂತ ಹೆಚ್ಚಿನ ಯೂನಿಟ್ ಬಳಸಿದರೆ, ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ,200ಕ್ಕೂ ಹೆಚ್ಚು ಯೂನಿಟ್ ಬಳಸಿದರೆ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ.

ಮನಸ್ಸಿಟ್ಟು ಜಾರಿ ಮಾಡಿದ್ದೇವೆ

"ಕಾಂಗ್ರೆ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡ ಜನರಿಗಾಗಿ ಕಾರ್ಯಕ್ರಮಗಳನ್ನು ಜಾರಿ ತರುತ್ತದೆ. ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಇತ್ತೀಚೆಗೆ ನನ್ನ ಭೇಟಿಯಾಗಿ ಕೇಳಿದ ಮೊದಲ ಪ್ರಶ್ನೆ, 5 ಗ್ಯಾರಂಟಿಗಳನ್ನು ಹೇಗೆ ಅನುಷ್ಠಾನಗೊಳಿಸುವಿರಿ ಎಂದು? ಮನಸ್ಸಿದ್ದಲ್ಲಿ ಮಾರ್ಗ ಇರುತ್ತದೆ, ದುಡ್ಡು ಹುಡುಕಿ ಅನುಷ್ಠಾನ ಮಾಡುತ್ತಾರೆ ಎಂದು ಉತ್ತರಿಸಿದೆ. ಅದನ್ನು ಸಿದ್ದರಾಮಯ್ಯ, ಶಿವಕುಮಾರ್, ಜಾರ್ಜ್ ಅವರು ಮಾಡಿ ತೋರಿಸಿದ್ದಾರೆ,"ಎಂದು ಮಲ್ಲಿಕಾರ್ಜುನ್ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನ ಬೆಳಗಿದ್ದೇವೆ

"ಜ.11ರಂದು ಪ್ರಜಾಧ್ವನಿ ಯಾತ್ರೆ ನಡೆಸಿ, ಬಡ ಜನರ ಕಣ್ಣೀರು ಒರೆಸಲು ನಾವು ಗ್ಯಾರಂಟಿಗಳನ್ನು ಕೊಟ್ಟೆವು. ನಿಮ್ಮ ಮನೆಯ ದೀಪ ಬೆಳೆಗಿಸುವ ಮೂಲಕ ಜನರ ಜೀವನ ಬೆಳಗಲು ಮುಂದಾಗಿದ್ದೇವೆ. ಪ್ರಿಯಾಂಕಾ ಗಾಂಧಿಯವರು ಪ್ರತಿ ಮನೆಯೊಡತಿಗೆ 2000ರೂ. ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ನೀಡಿದರು. ಈ ಎರಡು ಯೋಜನೆಗಳ ಚೆಕ್‌ ಮೇಲೆ ನಾನು ಮತ್ತು ಮುಖ್ಯಮಂತ್ರಿ ಸಹಿ ಮಾಡಿದ್ದೆವು. ಅದರಂತೆ ಈಗ ನಡೆದುಕೊಳ್ಳುತ್ತಿದ್ದೇವೆ,"ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೊಕ್ಕಸದ ಹಣ ಬಡವರಿಗೆ

"ಸರ್ಕಾರದ ಬೊಕ್ಕಸದ ಬಹುಪಾಲನ್ನು ಬಡಜನರಿಗೆ ತಲುಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಮಾತಿನಂತೆ ನಡೆಯುವ ಕೆಲಸ ಮಾಡುತ್ತಿದ್ದೇವೆ. ಐದು ಗ್ಯಾರಂಟಿಗಳ ಜತೆ ಪಾರದರ್ಶಕ ಆಡಳಿತ ನಾವು ಕೊಡುತ್ತೇವೆ. ಕರ್ನಾಟಕದ ಅಭಿವೃದ್ಧಿಯೇ ನಮ್ಮ ವಾಗ್ದಾನ," ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News