ನಾಳೆ ದೇಶಾದ್ಯಂತ ಸಾರಿಗೆ ಮುಷ್ಕರ; ಆಟೋ, ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್

ಮೋಟಾರು ವಾಹನ ತಿದ್ದುಪಡಿ ವಿಧೇಯಕ-2017 ಅನ್ನು ಕೈ ಬಿಡಬೇಕೆಂದು ಒತ್ತಾಯಿಸಿ ನಾಳೆ(ಆ.7) ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿವೆ.  

Last Updated : Aug 6, 2018, 05:51 PM IST
ನಾಳೆ ದೇಶಾದ್ಯಂತ ಸಾರಿಗೆ ಮುಷ್ಕರ; ಆಟೋ, ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್ title=

ಬೆಂಗಳೂರು: ಖಾಸಗಿ ವಾಹನಗಳ ಮಾಲೀಕರ ಶೋಷಣೆಗೆ ಅವಕಾಶ ನೀಡುತ್ತಿರುವ ಮೋಟಾರು ವಾಹನ ತಿದ್ದುಪಡಿ ವಿಧೇಯಕ-2017 ಅನ್ನು ಕೈ ಬಿಡಬೇಕೆಂದು ಒತ್ತಾಯಿಸಿ ನಾಳೆ(ಆ.7) ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿವೆ.  

ರಸ್ತೆ ಸಾರಿಗೆ ಕ್ಷೇತ್ರದಲ್ಲಿರುವ ಕಾರ್ಮಿಕರು ಮತ್ತು ಮಾಲೀಕರ ಸಂಘಟನೆಗಳ ವೇದಿಕೆಯಿಂದ ಈ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ನಾಳೆ ಬೆಳಗ್ಗೆ 6ಗಂಟೆಯಿಂದ ಸಂಜೆ 6 ರವರೆಗೆ ಸಂಪೂರ್ಣ ಬಂದ್ ನಡೆಸಲು ವೇದಿಕೆ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಟೌನ್‌ಹಾಲ್ ನಿಂದ ಫ್ರೀಡಂಪಾರ್ಕ್​ವರೆಗೆ ಬೃಹತ್ ರ್ಯಾಲಿ ನಡೆಸಲು ವೇದಿಕೆ ನಿರ್ಧರಿಸಿದೆ. ಬಳಿಕ ಕಾರ್ಮಿಕ ಸಂಘಟನೆಗಳ ಮುಖಂಡರು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಓಲಾ ಟ್ಯಾಕ್ಸಿ ಫಾರ್ ಶ್ಯೂರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ತನ್ವೀರ್ ಪಾಷ, "ನಾಳೆ ನಡೆಯಲಿರುವ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ನಾಳೆ ನಗರದಲ್ಲಿ ಯಾವುದೇ ಟ್ಯಾಕ್ಸಿ ಸೇವೆಗಳು ಲಭ್ಯವಿರುವುದಿಲ್ಲ. ಈ ಸಂಬಂಧ ಈಗಾಗಲೇ ನಮ್ಮ ಎಲ್ಲಾ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೂ ಸಂದೇಶ ರವಾನೆ ಮಾಡಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ನವರೆಗೆ ರ್ಯಾಲಿ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕಿನಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ" ಎಂದಿದ್ದಾರೆ.

ನಾಳಿನ ಮುಷ್ಕರಕ್ಕೆ ಹಲವು ಸಂಘಟನೆಗಳು ಬೆಂಬಲ ನೀಡಿರುವುದರಿಂದ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್'ಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. ಶಾಲಾ ಕಾಲೇಜುಗಳ ರಜೆ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. 

ಈ ಕಾಯ್ದೆಯ ಅನ್ವಯ ವಾಹನದ ನೋಂದಣಿಯಿಂದ ಹಿಡಿದು ಪ್ರತಿಯೊಂದಕ್ಕೂ ಏಜೆನ್ಸಿಯವರನ್ನೇ ಅವಲಂಬಿಸಬೇಕಾಗುತ್ತದೆ. ಅಲ್ಲದೆ, ರಾಜ್ಯಗಳ ಅಧಿಕಾರ ಮೊಟಕುಗೊಳ್ಳಲಿದೆ. ಅಂದರೆ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯಗಳ ಅಧಿಕಾರವೇ ಇರುವುದಿಲ್ಲ.

ಈಗ ರಾಜ್ಯಗಳ ಕೈಯಲ್ಲಿರುವ ಅಂತಾರಾಜ್ಯ ಪರ್ಮಿಟ್ ನೀಡುವ ಅಧಿಕಾರ ಪೂರ್ಣವಾಗಿ ಕೇಂದ್ರ ಸರ್ಕಾರದ ಪಾಲಾಗಲಿದೆ. ಸ್ಟೇಜ್ ಪರ್ಮಿಟ್ ಮತ್ತು ಕಾಂಟ್ರಾಕ್ಟ್ ಪರ್ಮಿಟ್ ಗಳ ಬದಲಿಗೆ ಒಂದೇ ಪರ್ಮಿಟ್ ಬರಲಿದ್ದು, ಲಾಸ್ಟ್ ಮೈಲ್ ಕನೆಕ್ಟಿವಿಟಿ ಹೆಸರಲ್ಲಿ ಖಾಸಗಿ ವಾಹನಗಳಿಗೆ ಪರ್ಮಿಟ್ ಇಲ್ಲದೆ ಓಡಿಸುವ ಅವಕಾಶ ಸಿಗಲಿದೆ.

Trending News