ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ತಮ್ಮ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಸಿದ್ಧತೆಗಾಗಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಟಿಕೆಟ್ ಹಂಚಿಕೆ ಸಂಬಂಧ ಚಿಕ್ಕಪೇಟೆ, ಶಿಗ್ಗಾವಿ, ರಾಜರಾಜೇಶ್ವರಿ ನಗರ, ಬೈಲಹೊಂಗಲ, ಮುದ್ದೇಬಿಹಾಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕುರಿತು ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಾಗೂ ಶಾಸಕ ತಿಪ್ಪೇಸ್ವಾಮಿ ನಡುವೆ ಮಾತಿನ ಸಮರ ಮುಂದುವರೆದಿದ್ದು, ಈ ಕ್ಷೇತ್ರದಲ್ಲಿ ಭಿನ್ನಮತ ತಣ್ಣಗಾಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಶ್ರೀರಾಮುಲು ಅವರನ್ನೂ ದೆಹಲಿಗೆ ಬರುವಂತೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಶ್ರೀರಾಮುಲು ಸಾಥ್ ನೀಡಲಿದ್ದಾರೆ. ನಾಳೆ ಶ್ರೀರಾಮುಲು ಜತೆ ಮಾತಕತೆ ನಡೆಸಲಿರುವ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಷಾ ಭಿನ್ನಮತ ಶಮನಕ್ಕಾಗಿ ಯಾವ ತಂತ್ರ ಹೆಣೆದಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಬಿಜೆಪಿ ಎರಡನೇ ಅಭ್ಯರ್ಥಿಗಳ ಪಟ್ಟಿ ಸಂಬಂಧ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ ನಂತರ ನಾಳೆ(ಏಪ್ರಿಲ್ 15)ಸಂಜೆಯೊಳಗೆ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.