ತುಮಕೂರು: ದೇಶದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸೂಲಗಿತ್ತಿ ನರಸಮ್ಮ ಮಂಗಳವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 98ವರ್ಷ ವಯಸ್ಸಾಗಿತ್ತು. ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ನರಸಮ್ಮ ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರ ಮೂಲದವರಾದ ನರಸಮ್ಮ ಆಂಜಿನಪ್ಪ ಅವರು, ‘ನರ್ಸಮ್ಮ’ ಎಂದೇ ಪರಿಚಿತರಾಗಿದ್ದರು. ಕಳೆದ 70 ವರ್ಷಗಳಿಂದ 10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ ನರಸಮ್ಮಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ, ವಯೋಶ್ರೇಷ್ಠ ಸನ್ಮಾನ, ದೇವರಾಜ ಅರಸು, ರಾಜ್ಯೋತ್ಸವ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅಕ್ಷರ ಜ್ಞಾನವಿಲ್ಲದಿದ್ದರೂ ವೈದ್ಯಕೀಯ ಕ್ಷೇತ್ರವೇ ಅಚ್ಚರಿಯಾಗುವಂತಹ ಸಾಧನೆ ಮಾಡಿರುವ ಇವರಿಗೆ 36 ಮೊಮ್ಮಕ್ಕಳಿದ್ದಾರೆ.