ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸ್ಪಷ್ಟನೆ ನೀಡಿದರು. ಇಂದು ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಈ ದೇಶದಲ್ಲಿ ದೊಡ್ಡ ಬದಲಾವಣೆ ಆಗಿದೆ. ಎಸ್ಸಿ ಪಟ್ಟಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ, ಬಂಜಾರ ಸಮುದಾಯವನ್ನು ನಾವು ಕರೆದು ಮಾತನಾಡುತ್ತೇವೆ. ಬಂಜಾರ, ಭೋವಿ, ಕೊರಮ, ಕೊರಚ, ಈ ನಾಲ್ಕನ್ನು ಎಸ್ಸಿ ಪಟ್ಟಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದರು.
ಬಿಜೆಪಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ. ಕರ್ನಾಟಕದಲ್ಲೂ ಕೂಡ ಬಹಳ ಆಳವಾಗಿ ಬೇರೂರಿರುವ ಪಕ್ಷವಾಗಿದ್ದು, ಅತ್ಯಂತ ಉತ್ತಮ ಸಂಘಟನೆ ಹೊಂದಿರುವ ಪಕ್ಷ. ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದು ತನ್ನದೇ ಆದ ಇತಿಹಾಸವನ್ನು ಹೊಂದಿದ ಏಕಾಂಗಿಯಾಗಿ ಪಕ್ಷ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು. ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿ ಬಾರಿಯೂ ಬೆಳೆಯುತ್ತಾ ಬಂದಿದೆ. ದಿವಂಗತ ಅನಂತ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳೆದ ಪಕ್ಷ ರೈತರಿಗೆ ವಿಶೇಷ ಬಜೆಟ್ ಕೊಡುವುದರ ಜೊತೆಗೆ ಎಲ್ಲಾ ವರ್ಗಗಳಿಗೂ ಹಲವು ಯೋಜನೆಗಳನ್ನು ನೀಡಿದೆ ಎಂದರು.
ದೇಶದಲ್ಲಿ ಇದ್ದ ಯುಪಿಎ ಸರ್ಕಾರ ದೇಶದಲ್ಲಿ ಅಸ್ಥಿರತೆ ಉಂಟು ಮಾಡಿತ್ತು. ಆರ್ಥಿಕವಾಗಿ ಅಸ್ಥಿರತೆ ಉಂಟಾಗಿ ಭ್ರಷ್ಟಾಚಾರದ ಸುರಿಮಳೆಯೇ ಆಯಿತು. ಪ್ರತಿಯೊಬ್ಬ ನಾಗರಿಕನಿಗೆ ಆತ್ಮವಿಶ್ವಾಸ ಮೂಡಬೇಕು. ನಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಅತಿ ಹೆಚ್ಚು ಕಿಮೀ ರಸ್ತೆ, ವಿಮಾನ ನಿಲ್ದಾಣ ಎಲ್ಲವೂ ಅಭಿವೃದ್ಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಬಗ್ಗೆ ಮಾತಾಡುವಾಗ ವಿರೋಧ ಪಕ್ಷಗಳು ಹಾಸ್ಯ ಮಾಡಿದವು. ಒಂದು ಮನೆಯ ಸ್ವಚ್ಛತೆಯ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರುವವರು 70 ವರ್ಷ ಆಡಳಿತ ಮಾಡಿದ್ದು ದುರ್ದೈವದ ಸಂಗತಿ ಎಂದರು.
ಇದನ್ನೂ ಓದಿ : Siddaramaiah : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ
ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಇದು ಬಿಜೆಪಿ ನರೇಂದ್ರ ಮೋದಿ, ಡಬಲ್ ಇಂಜಿನ್ ಸರ್ಕಾರದ ಕೆಲಸ. ಶೌಚಾಲಯ, ಮನೆ ಮನೆಗೆ ಬೆಳಕು ನೀಡಲಾಗಿದೆ. ಮಹಿಳೆಯರಿಗಾಗಿ ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಮಹಿಳಾ ಶಕ್ತಿ, ಕಾಯಕ ಯೋಜನೆ, ನೀಡಿ ದುಡಿಯವ ವರ್ಗಕ್ಕೆ ಗೌರವ ಮತ್ತು ಅವಕಾಶ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ ಎಂದರು.
ದುಡ್ಡೇ ದೊಡ್ಡಪ್ಪ ಎನ್ನುವುದನ್ನು ಬದಲಾಯಿಸಿ ದುಡಿಮೆಯೇ ದೊಡ್ಡಪ್ಪ ಎಂದು ನಿರೂಪಿಸಿದ್ದು ನಮ್ಮ ಸರ್ಕಾರ. ಸಮಿತಿ ಕಾಲಹರಣ ಮಾಡಿದ ಶ್ರೇಯಸ್ಸು ಕಾಂಗ್ರೆಸ್ಗೆ ಸೇರುತ್ತದೆ. ಲಂಬಾಣಿ ತಾಂಡಗಳ ಸುಮಾರು 1.5 ಲಕ್ಷ ಜನರಿಗೆ ಕಂದಾಯ ಗ್ರಾಮಗಳಾನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ನೀಡಿದ್ದು ನಮ್ಮ ಸರ್ಕಾರ ಎಂದರು.
ಕೊರೊನಾ, ಪ್ರವಾಹದ ನಡುವೆಯೂ ಮೂರು ವರ್ಷಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗಿದೆ. ಏನು ಮಾಡಲಾಗಿದೆ ಎಂದು ಪ್ರಶ್ನಿಸುವ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಸಿದ್ದರಾಮಯ್ಯನ ಮಾತಿನ ಶೈಲಿಯಲ್ಲೀ ಮಾತನಾಡಿ ವ್ಯಂಗ್ಯವಾಡಿದ ಮುಖ್ಯಮಂತ್ರಿಗಳು, ನಿಮ್ಮ ಆಡಳಿತದ ಅವಧಿಯಲ್ಲಿ ಏನು ಮಾಡಿದ್ದೀರಿ ಎಂದು ತೋರಿಸಿ ಎಂದರು.
ಇದನ್ನೂ ಓದಿ : ಇಷ್ಠಾರ್ಥ ಸಿದ್ದಿಗಾಗಿ ಕುಟುಂಬ ಸಮೇತ ದೇವರ ಮೊರೆಹೋದ ಡಿಕೆ ಶಿವಕುಮಾರ್..!
ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ನಾವು ಮಾಡಿದ ಸಾಧನೆಯ ವರದಿ ಹಿಡಿದು ಮತ ಕೇಳುತ್ತಿದ್ದೇವೆ. ಜೊತೆಗೆ ಕಾಂಗ್ರೆಸ್ ನ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು.
ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿದರು. ಆದರೆ ನಾವು ಧರ್ಮಗಳನ್ನು ಜೋಡಣೆ ಮಾಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಮು ಗಲಭೆಗಳಾದವು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿತ್ತು, ರಾಜ್ಯದ ಅಭಿವೃದ್ಧಿಯೇ ಆಗಿರಲಿಲ್ಲ, ಹೀಗಾಗಿ ಅವು ಕರಾಳ ದಿನಗಳು ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ 50ಕ್ಕೂ ಹೆಚ್ಚು ಹಗರಣಗಳು ನಡೆದವು. ಲೋಕಯುಕ್ತ ನಿಷ್ಕ್ರಿಯ ಗೊಳಿಸಿ, ಎಸಿಬಿಯನ್ನು ರಚಿಸಿ ನಾವು ಏನೂ ಮಾಡಿಲ್ಲ ಎಂದು ಜನರ ಕಣ್ಣಿಗೆ ಮಣ್ಣು ಎರೆಚಿದ್ದಾರೆ. ಅವರ ಕಾಲದಲ್ಲಿ ಲೋಕಯುಕ್ತ ಇದ್ದಿದ್ದರೆ, 100 ಪ್ರಕರಣಗಳು ಅವರ ಮೇಲೆ ಇರುತ್ತಿದ್ದವು. ನಮ್ಮ ಕಾಲದಲ್ಲಿ ಭ್ರಷ್ಟಾಚಾರದೊಂದಿಗೆ ರಾಜಿ ಇಲ್ಲ. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಅವರು ಅದರ ಬಗ್ಗೆ ದಾಖಲೆ ಕೊಡಲಿ. ಭ್ರಷ್ಟಾಚಾರದ ಬಗ್ಗೆ ಮಾತಾಡಲು ಇವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು.
ಸದಾಶಿವ ಆಯೋಗದ ಬಿಟ್ಟು, ಸಚಿವ ಸಂಪುಟ ಉಪ ಸಮಿತಿ ಪ್ರಕಾರ ಇದನ್ನು ಮಾಡಿದ್ದೇವೆ. ಅವರಿಗೆ ಮೀಸಲಾತಿ ಪ್ರಮಾಣ ಕೂಡ ಜಾಸ್ತಿಯಾಗಿದೆ. ಇದರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನೇತಾರರು ಎಲ್ಲೆಲ್ಲಿ ಸ್ಪರ್ಧೆ ಮಾದುತ್ತಾರೋ ಅಲ್ಲಿ ಇದನ್ನು ರಾಜಕೀಯ ವಾಗಿ ಬಳಸಿಕೊಳ್ಳಲು ಯೋಜನೆ ಮಾಡಿದ್ದಾರೆ. ಆದರೆ ಇದನ್ನು ನಾವು ರಾಜಕೀಯವಾಗಿ ಹೋರಾಡಲು ಮಾಡಲು ಸಿದ್ದರಿದ್ದೇವೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.