ಬೆಂಗಳೂರು: ನಾನು ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತುರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಾಳೆ ನಡೆಸಲಾಗುವುದು ಎಂದು ಸಿಜೆಐ ಹೇಳಿದ್ದಾರೆ
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ರಾಜೀನಾಮೆ ಸಲ್ಲಿಸಿದ್ದ 13 ಶಾಸಕರ ಪೈಕಿ 8 ಶಾಸಕರ ರಾಜಿನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಕೇವಲ ಐವರು ಶಾಸಕರ ರಾಜಿನಾಮೆಗಳು ಕ್ರಮಬದ್ಧವಾಗಿವೆ. ಇವರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಕ್ರಮಬದ್ಧವಲ್ಲದ ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಮತ್ತೊಮ್ಮೆ ಖುದ್ಧಾಗಿ ರಾಜೀನಾಮೆ ಸಲ್ಲಿಸಲು ತಿಳಿಸಲಾಗಿದೆ ಎಂದು ಹೇಳಿದ್ದರು.
ಅಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಐವರು ಶಾಸಕರ ವಿಚಾರಣೆ ನಡೆಸಲು ಜುಲೈ 12 ಮತ್ತು 15ನೇ ತಾರೀಖಿನಂದು ಸಮಯ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಅತೃಪ್ತ ಶಾಸಕರು, ಕಾನೂನುಬದ್ಧವಾಗಿರುವ ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.