ನವದೆಹಲಿ: ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮೂವರು ಸದಸ್ಯರ ಸಮಿತಿಯ ಸಂಧಾನ ಪ್ರಕ್ರಿಯೆ ವಿಫಲವಾಗಿದೆ ಎಂದು ಸುಪ್ರೀಕೋರ್ಟ್ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಆಗಸ್ಟ್ 6 ರಂದು ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆಯನ್ನು ಪ್ರಾರಂಭಿಸುವುದಾಗಿ ಸುಪ್ರೀಂಕೋರ್ಟ್‌ನ ಐದು ನ್ಯಾಯಾಧೀಶರ ನ್ಯಾಯಪೀಠ ಶುಕ್ರವಾರ ತಿಳಿಸಿದೆ.
"ವಾದಗಳು ಪೂರ್ಣಗೊಳ್ಳುವವರೆಗೆ ಪ್ರಕರಣವನ್ನು ಪ್ರತಿದಿನದ ವಿಚಾರಣೆ ನಡೆಸಲಾಗುವುದು" ಎಂದು ನ್ಯಾಯಪೀಠದ ಮುಖ್ಯಸ್ಥರಾಗಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರು ನ್ಯಾಯಪೀಠದ ಇತರ ಸದಸ್ಯರಾಗಿದ್ದಾರೆ.
ಮೊದಲ ವಿಚಾರಣೆಯ ದಿನಾಂಕದಿಂದ ಸುಮಾರು 100 ದಿನಗಳ ನಂತರ ನವೆಂಬರ್ 17 ರೊಳಗೆ ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಕರಣದ ವಿಚಾರಣೆಗೆ ಹಾಜರಾಗುವ ಪಕ್ಷಗಳು ತಮ್ಮ ಮನವಿಗಳು ಮತ್ತು ಸಾಕ್ಷ್ಯಗಳೊಂದಿಗೆ ಸಿದ್ಧರಾಗಿರಲು ಮತ್ತು ರಿಜಿಸ್ಟ್ರಿಗೆ ಮುಂಗಡ ಪ್ರತಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಕೇಳಿದೆ, ಅದು ವಿಚಾರಣೆ ಪ್ರಾರಂಭವಾಗುವ ಮೊದಲು ವಿಷಯವನ್ನು ಸಿದ್ಧಪಡಿಸಿಕೊಂಡಿರಲು ಸೂಚಿಸಿದೆ.
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಫ್‌ಎಂ ಕಲಿಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಮಾರ್ಚ್ 8 ರಂದು ಸುಪ್ರೀಂ ಕೋರ್ಟ್ ನೇಮಕ ಮಾಡಿತು. ಸಮಿತಿಯ ಇತರ ಇಬ್ಬರು ಸದಸ್ಯರಾಗಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಆಯ್ಕೆ ಮಾಡಲಾಗಿತ್ತು. ಸಂಧಾನ ಸಮಿತಿ ಗುರುವಾರ ತನ್ನ ವರದಿಯನ್ನು ಮೊಹರು ಮಾಡಿದ ಕವರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.ಇದರಲ್ಲಿ ಸಂಧಾನ ಪ್ರಕ್ರಿಯೆ ವಿಫಲವಾದ ಬಗ್ಗೆ ಉಲ್ಲೆಖಿಸಲಾಗಿದೆ ಎನ್ನಲಾಗಿದೆ.
2010ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಹದಿನಾಲ್ಕು ಮೇಲ್ಮನವಿಗಳು ಸುಪ್ರೀಂ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಇದು ಅಯೋಧ್ಯೆಯಲ್ಲಿ 2.77ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖರಾ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ವಿಭಜಿಸಲು ಆದೇಶಿಸಿದೆ.