ಬೆಂಗಳೂರು : ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ 204 ಕೋಟಿ ರೂ. ಪರಿಹಾರದ ಹಣ ಮಂಜೂರು ಮಾಡಲಾಗಿದೆ. ಅಲ್ಲದೆ ಈಗಾಗಲೇ 78 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿರುವ 12 ಜಿಲ್ಲೆಗಳ ಪರಿಸ್ಥಿತಿ, ಮಳೆ ಹಾನಿ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದಲ್ಲಿ ನಿನ್ನೆ ಸಂಜೆ ದೆಹಲಿಯಲ್ಲಿ ಸಭೆ ನಡೆಸಿದ ಕೇಂದ್ರ ಸರ್ಕಾರ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯ ಸರ್ಕಾರದ ಕೋರಿಕೆಯಂತ ಹಣ ಮಂಜೂರು ಮಾಡುವ ಭರವಸೆ ನೀಡಿದೆ.
ಇದಲ್ಲದೆ ರಾಜ್ಯ ಸರ್ಕಾರ ಕೂಡ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಗಳಿಗೆ ಹಣ ಹಂಚಿಕೆ ಮಾಡಿದೆ ಎಂದು ಹೇಳಲಾಗಿದೆ.
ಶತಮಾನದಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬಾಗಲಕೋಟೆಗೆ 10 ಕೋಟಿ ರೂ. ಹಾಗೂ ವಿಜಯಪುರಕ್ಕೆ 5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ತಿಳಿಸಿದ್ದಾರೆ.