ಮೈಸೂರು: ಪಕ್ಷಾಂತರ ಮಾಡಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರು ಸೋಲಬೇಕು. ಈ ಚುನಾವಣೆಯಲ್ಲಿ ಜನತೆ ನೀಡುವ ತೀರ್ಪು ಬರಿ ಅನರ್ಹ ಶಾಸಕರಿಗಷ್ಟೇ ಅಲ್ಲ ಎಲ್ಲಾ ರಾಜಕಾರಣಿಗಳಿಗೂ ಒಂದು ಪಾಠವಾಗಬೇಕು. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರು ಸಹ ಪಕ್ಷಾಂತರಿಗಳನ್ನು ಸೋಲಿಸಕೆಂಬ ಉದ್ದೇಶ ಹೊಂದಿರುವುದು ಸಂತೋಷದ ವಿಚಾರ. ಸ್ವಾರ್ಥ ಸಾಧನೆಗಾಗಿ ಸಂವಿಧಾನದ ನಿಯಮಗಳನ್ನು ಮೀರಿ, ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವವರಿಗೆ ಪಾಠ ಕಲಿಸಬೇಕು ಎಂಬುದು ನಮ್ಮೆಲ್ಲರ ಸಾಮಾನ್ಯ ಉದ್ದೇಶ ಎಂದರು.
ಸಂವಿಧಾನದಲ್ಲಿ ಪಕ್ಷಾಂತರ ಕಾಯ್ದೆಯನ್ನು ಸೇರಿಸಿರುವ ಉದ್ದೇಶವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಶಾಸಕರು ಮನಸ್ಸಿಗೆ ಬಂದಂತೆ ಪಕ್ಷ ಬದಲಾವಣೆ ಮಾಡುವಂತಿದ್ದರೆ ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ, ಹಿಂದೆ ಈ ಕಾನೂನು ಜಾರಿಗೆ ತರುವಾಗ ಬಿಜೆಪಿಯವರು ಸಹ ಬೆಂಬಲಿಸಿದ್ದರು ಎಂಬುದನ್ನು ಅವರು ಮರೆತಂತಿದೆ ಎಂದು ಬಿಜೆಪಿ ವಿರುದ್ಧ ದಾಳಿ ನಡೆಸಿದರು.
ಎಲ್ಲಾ ಪಕ್ಷಗಳ ನಾಯಕರು ನನ್ನನ್ನೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಮೇಲೆ ಭಯವೂ ಇರಬಹುದು ಅಥವಾ ನನ್ನನ್ನು ಭಯಪಡಿಸುವ ಉದ್ದೇಶವೂ ಇರಬಹುದು. ಇಂಥದ್ದನ್ನೆಲ್ಲ ನೋಡಿ, ಅನುಭವಿಸಿಯೇ ನಾನು ರಾಜಕಾರಣದಲ್ಲಿ ಇನ್ನೂ ಉಳಿದಿರುವುದು ಎಂಬ ಖಡಕ್ ಸಂದೇಶ ರವಾನಿಸಿಸುವ ಮೂಲಕ ತಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು.
ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಸವಾಲಿನ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್, ಯಾರಿಗೆ ಬೇಕಾದರೂ ಚಾಲೆಂಜ್ ಮಾಡಬಲ್ಲರು, ಯಾರ ಎದುರು ಬೇಕಾದರೂ ತೊಡೆ ತಟ್ಟಬಲ್ಲರು. ನಾನು ಅವರಿಗೆ ಚಾಲೆಂಜ್ ಮಾಡುವಷ್ಟು ಪಾಪ್ಯುಲರ್ ನಾಯಕನಲ್ಲ. ಒಂದು ಬಾರಿ ಸೋಲಿಸಿದ್ದೀನಿ. ಅಷ್ಟು ಸಾಕು ಎಂದು ಕಾಲೆಳೆದರು.