Beer Side Effects : ಬೇಸಿಗೆಯಲ್ಲಿ ಹೆಚ್ಚಿನವರು ಚಿಲ್ಡ್ ಬಿಯರ್ ಕುಡಿಯಲು ಇಷ್ಟಪಡುತ್ತಾರೆ. ಬಿಯರ್ ಕುಡಿದರೆ ಸುಸ್ತು ಸಂಪೂರ್ಣವಾಗಿ ಮಾಯವಾಗುತ್ತದೆ ಎಂಬುವುದು ಅವರ ನಂಬಿಕೆ. ಇದು ಇತರ ಆಲ್ಕೊಹಾಲ್ಯುಕ್ತ ಪಾನೀಯಗಳಿಗಿಂತ ಕಡಿಮೆ ಹಾನಿಕಾರಕ ಎಂದೂ ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಬಿಯರ್ ಕುಡಿಯುವುದರಿಂದ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
Beer Health benefits : ಬಿಯರ್ ಕುಡಿಯುವುದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಪ್ರತಿನಿತ್ಯವೂ ಬಿಯರ್ ಕುಡಿಯುವುದರಿಂದ ಅನೇಕ ಆರೋಗ್ಯ ಪರಿಣಾಮಗಳು ಉಂಟಾಗಬಹುದು. ಇದರಿಂದ ದೇಹದಲ್ಲಿ ನಾನಾ ರೀತಿಯ ಕಾಯಿಲೆಗಳು ಬರುವ ಅಪಾಯವಿದೆ.
ನೀವು ಪ್ರತಿದಿನ ಬಿಯರ್ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಜಾಗರೂಕರಾಗಿರಿ. ಇಲ್ಲದಿದ್ದರೆ ನೀವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರತಿನಿತ್ಯ ಬಿಯರ್ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ..
ಪ್ರತಿ ದಿನ ಬಿಯರ್ ಕುಡಿಯುವುದರಿಂದ ತೂಕ ಬಹು ಬೇಗ ಹೆಚ್ಚುತ್ತದೆ. ಬಿಯರ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು, ಇದರಲ್ಲಿ ಕಾರ್ಬೋಹೈಡ್ರೇಟ್ ಕೂಡ ಅಧಿಕವಾಗಿದೆ. ದಿ ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಬಿಯರ್ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಮತ್ತು ಬೊಜ್ಜು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ.
ಅತಿಯಾಗಿ ಬಿಯರ್ ಕುಡಿಯುವುದರಿಂದ ಯಕೃತ್ತಿಗೆ ಹಾನಿಯಾಗುತ್ತದೆ. ಫ್ಯಾಟಿ ಲಿವರ್, ಆಲ್ಕೋಹಾಲಿಕ್ ಹೆಪಟೈಟಿಸ್ ಮತ್ತು ಸಿರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಜರ್ನಲ್ ಆಫ್ ಹೆಪಟಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯು ದೈನಂದಿನ ಬಿಯರ್ ಸೇವನೆಯು ಯಕೃತ್ತಿನ ಉರಿಯೂತ, ಹುಣ್ಣು ಮತ್ತು ಅಂತಿಮವಾಗಿ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಕಂಡುಹಿಡಿದಿದೆ.
ಬಿಯರ್ ಅನ್ನು ಮಿತವಾಗಿ ಕುಡಿಯುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು, ಆದರೆ, ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಕುಡಿದರೆ, ಹೃದಯಕ್ಕೆ ಸಂಬಂಧಿಸಿ ಕಾಯಿಲೆ ಹೆಚ್ಚಾಗುತ್ತವೆ. ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ದೈನಂದಿನ ಬಿಯರ್ ಸೇವನೆ ಅಧಿಕ ರಕ್ತದೊತ್ತಡ, ಕಾರ್ಡಿಯೊಮಿಯೋಪತಿ ಮತ್ತು ಪಾರ್ಶ್ವವಾಯುಗಳಂತಹ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ.
ಪ್ರತಿದಿನ ಬಿಯರ್ ಕುಡಿಯುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆ ಅಪಾಯವನ್ನು ಹೆಚ್ಚಿಸುತ್ತದೆ. ಜರ್ನಲ್ ಆಫ್ ಅಫೆಕ್ಟಿವ್ ಡಿಸಾರ್ಡರ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಅತಿಯಾದ ಬಿಯರ್ ಸೇವನೆಯು ಖಿನ್ನತೆಗೆ ಕಾರಣವಾಗಬಹುದು ಎಂದು ಕಂಡುಹಿಡಿದಿದೆ.
ಪ್ರತಿದಿನ ಬಿಯರ್ ಕುಡಿಯುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಮಲಗುವ ಮುನ್ನ ಬಿಯರ್ ಕುಡಿಯುವುದರಿಂದ ಸಂಪೂರ್ಣವಾಗಿ ನಿದ್ದೆಯಾಗುವುದಿಲ್ಲ ಎಂಬ ವಿಚಾರವನ್ನು ಕಂಡುಹಿಡಿದಿದೆ.