ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'NDA ಒಕ್ಕೂಟದಲ್ಲಿ ಯಾವುದೇ ತೊಂದರೆಯಿಲ್ಲ. ಹೀಗಾಗಿಯೇ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಸೂದೆ ಅಂಗೀಕಾರಕ್ಕೆ ನಮಗೆ ಬಹುಮತವಿದೆ ಎಂದು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿರುವ ತಿವಾರಿ ಕಾಂಗ್ರೆಸ್, ಟಿಎಂಸಿ ಮತ್ತು ಎಐಎಂಐಎಂ ಪಕ್ಷದ ನಾಯಕರು ಪಾಕಿಸ್ತಾನಿಗಳಂತೆ ಮಾತನಾಡುತ್ತಾರೆ" ಎಂದು ವಾಗ್ಧಾಳಿ ನಡೆಸಿದ್ದಾರೆ.
311 ಮತಗಳೊಂದಿಗೆ ಸೋಮವಾರ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ 2019 ಅಂಗೀಕಾರವಾಯಿತು. 391 ಸಂಸದರಲ್ಲಿ 311 ಸಂಸದರು ಮಸೂದೆ ಪರವಾಗಿ ಮತ ಚಲಾಯಿಸಿದರೆ, 80 ಸಂಸದರು ಮಸೂದೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಮಸೂದೆ ಅಂಗೀಕಾರವಾಗಿತ್ತು. ಈ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ಇಂದು ಮಧ್ಯಾಹ್ನ 12ಗಂಟೆಗೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ-2019ನ್ನು ಮಂಡಿಸಲಾಗಿದೆ. 12ಗಂಟೆಗೆ ರಾಜ್ಯಸಭೆಯ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆ, ಈ ಮಸೂದೆಯ ಕುರಿತು ಚರ್ಚೆ ಕೂಡ ಆರಂಭಗಾಗಿದೆ. ಮಸೂದೆ ಮಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಶರಣಾರ್ಥಿಗಳಿಗೆ ಹಕ್ಕು ಹಾಗೂ ಸನ್ಮಾನ ಕಲ್ಪಿಸುವ ಮಸೂದೆಯಾಗಿದೆ. ಕೋಟ್ಯಂತರ ವಲಸಿಗರು ಈ ಪೌರತ್ವ ಮಸೂದೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಎಂದಿದ್ದಾರೆ. ಲಕ್ಷಾಂತರ, ಕೋಟ್ಯಾಂತರ ಜನರು ನೋವಿನಿಂದ ಬದಕುತ್ತಿದ್ದಾರೆ. ಅವರಿಗೆ ಹೊಸ ಚೈತನ್ಯ ತುಂಬುವ ಬಿಲ್ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗಿದ್ದು, ಅಲ್ಲಿ ಕಿರುಕುಳದಿಂದ ಬೇಸತ್ತು ಭಾರತ ಪ್ರವೇಶಿಸಿದವರಿಗೋಸ್ಕರ ಈ ಮಸೂದೆ ತರಲಾಗಿದ್ದು, ಇದು ಅವರಿಗೆ ಸಮಾನತೆಯ ಹಕ್ಕು ನೀಡುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.