SSLC ಪೂರ್ವ ಸಿದ್ಧತಾ‌ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಕುರಿತು ಶಿಕ್ಷಣ ಸಚಿವರು ಏನಂದ್ರು?

SSLC ಪೂರ್ವ ಸಿದ್ಧತಾ‌ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಎನ್ನುವ ಪತ್ರಿಕಾ ವರದಿಗಳ ಕುರಿತಂತೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಕೆಳಕಂಡಂತೆ ತಮ್ಮ‌ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ.  

Last Updated : Feb 22, 2020, 05:48 AM IST
SSLC ಪೂರ್ವ ಸಿದ್ಧತಾ‌ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಕುರಿತು ಶಿಕ್ಷಣ ಸಚಿವರು ಏನಂದ್ರು? title=

ಬೆಂಗಳೂರು: SSLC ಪೂರ್ವ ಸಿದ್ಧತಾ‌ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಎನ್ನುವ ಪತ್ರಿಕಾ ವರದಿಗಳ ಕುರಿತಂತೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಕೆಳಕಂಡಂತೆ ತಮ್ಮ‌ ಅಧಿಕೃತ ಹೇಳಿಕೆಯನ್ನು ನೀಡಿದ್ದು, "ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು ಮಕ್ಕಳು ಅಂತಿಮ‌ ಪರೀಕ್ಷೆಯ ಸ್ವರೂಪವನ್ನು‌ ಅರ್ಥ ಮಾಡಿಕೊಳ್ಳಬೇಕೆನ್ನುವ ಉದ್ದೇಶದಿಂದಷ್ಟೆ ಎಂದಿದ್ದಾರೆ.

ಅಂತಿಮ‌ ಪರೀಕ್ಷೆಯ ಮಾದರಿ ಯಾವ ರೀತಿಯಲ್ಲಿರುತ್ತದೆ ಎನ್ನುವ ಪರಿಚಯ ಮಕ್ಕಳಿಗಾಗಲಿ ಎನ್ನುವ ಉದ್ದೇಶದಿಂದ ಈ ಬಾರಿ ಮಂಡಳಿಯೇ ಬಹುಪಾಲು ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ. ಸುಮಾರು 15000 ಪ್ರೌಢ‌ಶಾಲೆಗಳ ಪೈಕಿ ಸುಮಾರು 2500 ಶಾಲೆಗಳಲ್ಲಿ ಶಿಕ್ಷಕರ ಸಂಘಟನೆಗಳು‌ ನಡೆಸಿದ‌ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳಿಗೆ ಮಂಡಳಿ ಮುಂಚಿತವಾಗಿಯೇ ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಪರೀಕ್ಷೆಗಳು ಆಯಾ ಶಾಲೆಗಳಲ್ಲಿಯೇ, ಆಯಾ ಮುಖ್ಯಶಿಕ್ಷಕರ-ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ನಡೆದಿವೆ ಎಂದು ಮಾಹಿತಿ ನೀಡಿದ ಶಿಕ್ಷಣ ಸಚಿವರು, ಶಾಲಾ ಮುಖ್ಯಸ್ಥರುಗಳು ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವುದು, ಅವರ ಕೈಗೆ ಪ್ರಶ್ನೆ ಪತ್ರಿಕೆಗಳು ಮುಂಚೆಯೇ ತಲುಪಿರುವುದು ಸಹ ಇಂತಹ ಪರಿಸ್ಥಿತಿಗೆ ಕಾರಣ ಆಗಿರಬಹುದು. ಇದು ಒಂದು ರೀತಿಯ ನೈತಿಕ‌ ಜವಾಬ್ದಾರಿಯ ಪ್ರಶ್ನೆಯಾಗಿತ್ತು ಎಂದು ತಿಳಿಸಿದ್ದಾರೆ.

ಇಷ್ಟೆಲ್ಲ ಆದರೂ ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಎಂಬ ಕಲ್ಪನೆಯಿಂದ‌ ಗ್ರಹಿಸುವುದೇ ಸರಿಯಲ್ಲ ಎನ್ನುವುದು ನನ್ನ ಭಾವನೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

ಎಲ್ಲಕ್ಕಿಂತ ಮುಖ್ಯವಾಗಿ ಅಂತಿಮ ಪರೀಕ್ಷಾ ವ್ಯವಸ್ಥೆ ಬೇರೆಯೇ‌ ಆಯಾಮವನ್ನು ಹೊಂದಿರುತ್ತದೆ. ಎರಡೂವರೆ ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸಂಪೂರ್ಣ ವಿಭಿನ್ನವಾಗಿ‌, ಅತ್ಯಂತ ಸುರಕ್ಷಿತವಾಗಿ ನಿರ್ವಹಿಸುವ ವ್ಯವಸ್ಥೆ ಹಿಂದಿನಿಂದಲೂ‌ ಜಾರಿಯಲ್ಲಿದ್ದು, ಅದನ್ನೇ ಈ ಬಾರಿಯೂ ನಿರ್ವಹಿಸಲಾಗುವುದು. ಅದರ‌ ಬಗ್ಗೆ ಯಾವ ಗೊಂದಲಕ್ಕೆ, ಆತಂಕಕ್ಕೆ ಅವಕಾಶವಿಲ್ಲ ಎಂದು ಸಚಿವ ಎಸ್. ಸುರೇಶ್‌ಕುಮಾರ್ ಸ್ಪಷ್ಟಪಡಿಸಿದರು.

Trending News