ರಾಜ್ಯದ ಬಹುದಿನದ ಬೇಡಿಕೆಯಾಗಿದ್ದ ಐಐಐಟಿ ಸ್ಥಾಪನೆಗೆ ಸಮ್ಮತಿಸಿದ ಕೇಂದ್ರ ಸಚಿವ ಸಂಪುಟ

ಐಐಐಟಿ ಪಡೆಯುವುದು ಕರ್ನಾಟಕದ ಬಹುದಿನಗಳ ಕನಸಾಗಿತ್ತು-  ಸಚಿವ ಅನಂತ್ ಕುಮಾರ್

Last Updated : Jan 24, 2018, 07:14 PM IST
ರಾಜ್ಯದ ಬಹುದಿನದ ಬೇಡಿಕೆಯಾಗಿದ್ದ ಐಐಐಟಿ ಸ್ಥಾಪನೆಗೆ ಸಮ್ಮತಿಸಿದ ಕೇಂದ್ರ ಸಚಿವ ಸಂಪುಟ title=

ನವದೆಹಲಿ: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಬಹುದಿನದ ಬೇಡಿಕೆಯಾಗಿದ್ದ ಐಐಐಟಿ ಸ್ಥಾಪನೆಗೆ ಸಮ್ಮತಿ ದೊರೆತಿದೆ. ರಾಯಚೂರು ಜಿಲ್ಲೆಯಲ್ಲಿ ಐಐಐಟಿ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ರಾಜ್ಯದ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರಿಗೆ ಒಪ್ಪಿಗೆ ಪತ್ರವನ್ನು ರವಾನಿಸಿದರು.

ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಕಾಶ್ ಜಾವ್ಡೇಕರ್, ಕರ್ನಾಟಕದಲ್ಲಿ ಸದಾ ಒಳ್ಳೆಯ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ‌ ಇದೆ. ಮೊದಲಿಂದಲೂ ಕರ್ನಾಟಕದಿಂದ‌ ಐಐಐಟಿ ಸ್ಥಾಪನೆಗೆ  ಬೇಡಿಕೆ‌ ಇತ್ತು. ಆದ್ದರಿಂದ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ, ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಲಾಗುವುದು ಎಂದು ತಿಳಿಸಿದರು.

ಐಐಐಟಿ ಪಡೆಯುವುದು ಕರ್ನಾಟಕದ ಬಹುದಿನಗಳ ಕನಸಾಗಿತ್ತು...
ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಒಪ್ಪಿಗೆ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅನಂತ್ ಕುಮಾರ್, ಐಐಐಟಿ ಪಡೆಯುವುದು ಕರ್ನಾಟಕದ ಬಹುದಿನಗಳ ಕನಸಾಗಿತ್ತು, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಸಿಕ್ಕಿರುವುದು ತಮಗೆ ಬಹಳ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯಾಗಿದೆ. ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಶಿಕ್ಷಣ ಸಿಗುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಈ ರೀತಿಯ ವಾತಾವರಣ ನಿರ್ಮಾಣವಾಗುವ ಅಗತ್ಯವಿತ್ತು. ಆದ್ದರಿಂದ‌ ಕೇಂದ್ರ ಸರ್ಕಾರ ರಾಯಚೂರಿಗೆ ಐಐಐಟಿ ಕೊಡಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಐಐಐಟಿ ರೂಪುರೇಷೆ ಹೇಗೆ?
ಐಐಐಟಿ ಸ್ಥಾಪನೆಗೆ ನೂರು ಎಕರೆ ಜಾಗದ ಅಗತ್ಯವಿದೆ. ಇದು ಪಿಪಿಪಿ ಯೋಜನೆಯಡಿ ರೂಪುಗೊಳ್ಳಬೇಕಾಗಿದೆ. ತಕ್ಷಣವೇ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಆರು ತಿಂಗಳ ಒಳಗೆ ಎಲ್ಲಾ ಕೆಲಸಗಳು ಆಗಬೇಕು. ಮುಂದಿನ‌ ಶೈಕ್ಷಣಿಕ ವರ್ಷದಿಂದ‌ ಈ ಸಂಸ್ಥೆ ಆರಂಭವಾಗಬೇಕು ಎಂದು ಸಚಿವ ಅನಂತ್ ಕುಮಾರ್ ಐಐಐಟಿ ರೂಪುರೇಷೆ ಬಗ್ಗೆ ವಿವರಿಸಿದರು.

Trending News