ಬೆಂಗಳೂರು : 'ಮಾಸ್ತಿ ಗುಡಿ' ಚಿತ್ರದ ಚಿತ್ರಿಕರಣ ವೇಳೆ ಸಹ ನಟರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್ ಅವರನ್ನು ಬೆಂಗಳೂರಿನ ಚೆಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಶುಕ್ರವಾರ ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
'ಮಾಸ್ತಿಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡನ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸುಂದರ್ ಗೌಡ ಪರಾರಿ ಆಗಲು ಸಹಕಾರ ನೀಡಿದ್ದಾರೆ ಏಂದು ಆರೋಪಿಸಿ ತಾವರೆಕೆರೆ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ದೂರು ನೀಡಿದ್ದ ಹಿನ್ನೆಲೆಯಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ದುನಿಯಾ ವಿಜಯ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೆಲಿಕಾಪ್ಟರ್ನಿಂದ ಜಿಗಿದು ಉದಯೋನ್ಮುಖ ನಟರಾದ ಉದಯ್ ಹಾಗೂ ಅನಿಲ್ ಅವರು ದುರಂತ ಸಾವನ್ನಪ್ಪಿದ್ದರು. ಈ ಸಂಬಂಧ ಸಿನಿಮಾ ನಿರ್ಮಾಪಕ ಪಿ.ಸುಂದರ್ ಗೌಡ, ನಿರ್ದೇಶಕ, ಸಾಹಸ ನಿರ್ದೇಶಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ತಾವರಕೆರೆ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ರಾಮನಗರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಗೆ ನಿರ್ಮಾಪಕ ಪಿ.ಸುಂದರ್ ಗೌಡ ನಿರಂತರವಾಗಿ ಗೈರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ತಾವರೆಕೆರೆ ಪೊಲೀಸರು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿರುವ ಸುಂದರಗೌಡ ನಿವಾಸಕ್ಕೆ ಆಗಮಿಸಿ ವಾರೆಂಟ್ ಜಾರಿಗೊಳಿಸಿ ಬಂಧಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಕಾಣಿಸಿಕೊಂಡ ದುನಿಯಾ ವಿಜಿ ತಾವರೆಕೆರೆ ಪೊಲೀಸರೊಂದಿಗೆ ಮಾತನಾಡಿಸುತ್ತಿದ್ದಾಗ ನಿರ್ಮಾಪಕ ಸುಂದರಗೌಡ ಪರಾರಿಯಾಗಿದ್ದರು. ಹೀಗಾಗಿ ಸುಂದರ್ ಗೌಡ ಪರಾರಿ ಆಗಲು ಸಹಕಾರ ನೀಡಿದ್ದಾರೆ ನೀಡಿದ ಆರೋಪದ ಮೇಲೆ ಪೊಲೀಸರು ವಿಜಯ್ ವಿರುದ್ಧ ಪ್ರಕರಣ ದಾಖಲಿಸಿ ಇಂದು ಬಂಧಿಸಿದ್ದಾರೆ.