ಬೆಂಗಳೂರು: ಜನ ಮೆಚ್ಚುಗೆಯ ರಿಯಾಲಿಟಿ ಶೋಗಳು, ಧಾರಾವಾಹಿಗಳು ಮತ್ತು ವಿನೂತನ ಕಾರ್ಯಕ್ರಮಗಳಿಗೆ ಹೆಸರಾಗಿರುವ ಅತಿ ಜನಪ್ರಿಯ ಮನೋರಂಜನಾ ವಾಹಿನಿ 'ಜೀ ಕನ್ನಡ' ಇದೀಗ ಕರ್ನಾಟಕ ರಾಜ್ಯಾದ್ಯಂತ ರ್ಯಾಗಿಂಗ್ ವಿರೋಧಿ ಅಭಿಯಾನ ಹಮ್ಮಿಕೊಂಡಿದೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಉನ್ನತ ಅಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಬಂದು ಇಲ್ಲಿನ ಕಾಲೇಜುಗಳಿಗೆ ಸೇರುತ್ತಾರೆ. ಆದರೆ ಅಂತಹ ಮುಗ್ಧ ವಿದ್ಯಾರ್ಥಿಗಳ ವಿರುದ್ಧ ಕಾಲೇಜುಗಳಲ್ಲಿ ರ್ಯಾಗಿಂಗ್ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಾಗಿ ಇದನ್ನು ವಿರೋಧಿಸುವ ಮತ್ತು ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಜೀ ಕನ್ನಡ ವಾಹಿನಿ ವಹಿಸಿಕೊಂಡಿದ್ದು, ವಿದ್ಯಾರ್ಥಿ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ.
ಜೀ ವಾಹಿನಿಯಲ್ಲಿ ಹೆಣ್ಣು ಮಕ್ಕಳ ಕಷ್ಟಗಳು, ಭಾವನೆಗಳು ಮತ್ತು ಜೀವನದುದ್ದಕ್ಕೂ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ನೂತನ ಧಾರವಾಹಿ 'ಕಮಲಿ'ಯಲ್ಲಿ ವಿವರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಲೇಜುಗಳಲ್ಲಿ ರ್ಯಾಗಿಂಗ್ ವಿರೋಧಿ ಅಭಿಯಾನ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿರುವ ರ್ಯಾಗಿಂಗ್, ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡುತ್ತಿದೆ. ಈ ಪಿಡುಗಿನ ಬಗ್ಗೆ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಿರುನಾಟಕ ಮತ್ತು ಪೋಸ್ಟ್ ಕಾರ್ಡ್ ಅಭಿಯಾನವನ್ನು ಜೀ ಕನ್ನಡ ವಾಹಿನಿ ಹಮ್ಮಿಕೊಂಡಿದೆ.
ಈಗಾಗಲೇ ಬೆಂಗಳೂರಿನಲ್ಲಿ ಈ ಅಭಿಯಾನ ಆರಂಭವಾಗಿದ್ದು, ಸುರಾನಾ ಕಾಲೇಜ್ ಪೀಣ್ಯ, ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮತ್ತು ಸುರಾನಾ ಕಾಲೇಜ್ ಕೆಂಗೇರಿ ಒಳಗೊಂಡು ನಾಲ್ಕು ಕಾಲೇಜುಗಳಿಗೆ ಭೇಟಿ ನೀಡಿದೆ. ಇದಲ್ಲದೆ ಕರ್ನಾಟಕ ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹುಬ್ಬಳ್ಳಿಯ ವಿವಿಧ ನಗರಗಳಲ್ಲಿರುವ 25 ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದೆ.
ಈ ಅಭಿಯಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು, "ರ್ಯಾಗಿಂಗ್ ದೇಶದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಕಟಿಬದ್ಧರಾಗಿದ್ದೇವೆ. ಈ ಅಭಿಯಾನದಲ್ಲಿ ರ್ಯಾಗಿಂಗ್ನ ಪರಿಣಾಮಗಳ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ಅರಿವನ್ನುಂಟು ಮಾಡಿ, ರ್ಯಾಗಿಂಗ್ ಬಾಧಿತರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ನಡೆಯಲಿದೆ" ಎಂದಿದ್ದಾರೆ.