ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ವ್ಯಕ್ತಿಯೋರ್ವ ದೆಹಲಿಯ ಮೆಟ್ರೋ ಭವನದ ಬಳಿ ಇರುವ ಎತ್ತರದ ಟವರ್ ಹತ್ತಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಈ ವ್ಯಕ್ತಿ ಅಷ್ಟು ಎತ್ತರದ ಟವರ್ ಮೇಲೆ ಹತ್ತಿ ಕುಳಿತಿದ್ದು ಸ್ಥಳೀಯ ಅಧಿಕಾರಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ಸಮನೆ ಮಳೆ ಬೀಳುತ್ತಿದ್ದರೂ, ಆ ನಡುವೆಯೇ ಈ ವ್ಯಕ್ತಿ ಒಂದೇ ಬಾರಿಗೆ ಎತ್ತರದ ಟವರ್ ಹತ್ತಿ ತುದಿ ತಲುಪಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸಿದ. ಈ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದಲ್ಲದೆ, ಮಳೆಯಿಂದಾಗಿ ಸಂಪೂರ್ಣ ಒದ್ದೆಯಾಗಿ ಜಾರಿ ಬೀಳುವ ಪರಿಸ್ಥತಿಯಲ್ಲೂ ಟವರ್ ಮೇಲೆ ಹತ್ತಿ ತನ್ನ ಜೀವವನ್ನೇ ಅಪಾಯದ ಅಂಚಿಗೆ ಕೊಂಡೊಯ್ದಿದ್ದ.
ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು.
ಕೇಂದ್ರ ಸರ್ಕಾರ ಆಂಧ್ರಪ್ರದೇಶವನ್ನು ಕಡೆಗಣಿಸಿದೆ. ತಾರತಮ್ಯ ನೀತಿ ಅನುಸರಿಸುತ್ತಿದೆ. ವಿಶೇಷ ಸ್ಥಾನಮಾನ ನೀಡುವಲ್ಲಿ ರಾಜ್ಯವನ್ನು ಕಡೆಗಣಿಸಿದೆ ಎಂದು ಆರೋಪಿಸಿ ಸಂಸತ್ತಿನಲ್ಲಿ ಇತ್ತೀಚೆಗೆ ಟಿಡಿಪಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು.