ಚಂದ್ರಕಾಂತ್ ಆರ್ಯ. ಇತ್ತೀಚೆಗೆ ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪನ್ನು ಪಸರಿಸಿ, ಕನ್ನಡದಲ್ಲೇ ಭಾಷಣ ಮಾಡಿ ಕನ್ನಡಿಗರ ಮನೆಗೆದ್ದಿದ್ದರು. ಇವರ ಬಗ್ಗೆ ಜೀ ಕನ್ನಡ ಸುದ್ದಿ ಮಾಧ್ಯಮ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡಲು ಮುಂದಾಗಿದೆ.
ಹೆಮ್ಮೆಯ ಕನ್ನಡಿಗ ಚಂದ್ರಕಾಂತ್ ಆರ್ಯ ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಲು ಗ್ರಾಮದವರು. ಹುಟ್ಟಿದ್ದು 1963ರಲ್ಲಿ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಸಹ ತಾಯ್ನಾಡಿನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕನ್ನಡ, ಕನ್ನಡ ನಾಡು ಎಂದರೆ ಚಂದ್ರ ಆರ್ಯರಿಗೆ ಪಂಚಪ್ರಾಣ.
ಇತ್ತೀಚೆಗೆ ಕೆನಡಾ ಸಂಸತ್‌ನಲ್ಲಿ ಕನ್ನಡ ಭಾಷೆಯಲ್ಲಿ ಭಾಷಣ ಮಾಡಿ ಕನ್ನಡಿಗರ ಗಮನ ಸೆಳೆದಿದ್ದರು. ಅವರು ಕನ್ನಡದಲ್ಲಿ ಭಾಷಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
"ನಾನು ಕೆನಡಾದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಪ್ರಪಂಚದ ಯಾವುದೇ ಸಂಸತ್ತಿನಲ್ಲಿ ಕನ್ನಡವನ್ನು ಮಾತನಾಡುವುದು ಇದೇ ಮೊದಲು" ಎಂದು ಕೆನಡಾ ಸಂಸದ ಚಂದ್ರ ಆರ್ಯ ಭಾಷಣ ಮಾಡಿದ್ದರು.
ಚಂದ್ರ ಆರ್ಯ ಅವರು ರಾಷ್ಟ್ರಕವಿ ಕುವೆಂಪು ಅವರ ಕವಿತೆಯೊಂದಿಗೆ ತಮ್ಮ ಭಾಷಣವನ್ನು ಕೊನೆಗೊಳಿಸಿದ್ದರು. ಇನ್ನು ಚಂದ್ರ ಆರ್ಯ ಅವರು ನಡಾದ ಲಿಬರಲ್ ರಾಜಕಾರಣಿ. 2015 ರ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ನೇಪಿಯನ್ ಕ್ಷೇತ್ರದಿಂದ ಪ್ರತಿನಿಧಿಸಿ, ಎರಡು ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ.
ಇವರು ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕೌಸಾಲಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ಚಂದ್ರ ಆರ್ಯ ಅವರು ದ್ವಾರಾಲು ಗ್ರಾಮದ ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿಯ ಪುತ್ರ. ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.