ಭಾರತದ ಅತಿ ವೇಗದ ಇಂಜಿನ್ ರಹಿತ ರೈಲು, Train 18 ವೈಶಿಷ್ಟ್ಯಗಳೇನು ಗೊತ್ತೇ?

ಭಾರತದ ರೈಲು ಸಂಚಾರದಲ್ಲಿ ನೂತನ ಕ್ರಾಂತಿಯನ್ನೇ ಮಾಡಲು ಹೊರಟಿರುವ ಇಂಜಿನ್ ರಹಿತ ಟ್ರೈನ್ 18 ಅತ್ಯಾಧುನಿಕ ಒಳಾಂಗಣ, ವೈ ಫೈ ವ್ಯವಸ್ಥೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. 

  • Oct 29, 2018, 16:53 PM IST

ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ ಭಾರತದ ಅತಿ ವೇಗದ ಮೊದಲ ಇಂಜಿನ್ ರಹಿತ ರೈಲು Train 18 ಇಂದಿನಿಂದ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ. ದೀರ್ಘ ಪ್ರಯಾಣಕ್ಕಾಗಿ ಹೇಳಿ ಮಾಡಿಸಿದಂತಿರುವ ಈ ರೈಲಿನಲ್ಲಿ ಮನೋರಂಜನಾ ಸೌಲಭ್ಯವನ್ನೂ ಒದಗಿಸಲಾಗಿದೆ. ಈ ರೈಲಿನ ವಿಶೇಷತೆಗಳನ್ನು ತಿಳಿದರೆ, ಒಮ್ಮೆಯಾದರೂ ಇದರಲ್ಲಿ ಪ್ರಯಾಣಿಸಬೇಕು ಎಂದು ನಿಮಗೆ ಅನಿಸದೇ ಇರದು.

1 /9

ಭಾರತೀಯ ರೈಲ್ವೆಯ ಅತ್ಯಾಧುನಿಕ ರೈಲು 18 ಇಂದಿನಿಂದ ಪ್ರಯೋಗಾರ್ಥ ಸಂಚಾರ ಆರಂಭಿಸಲಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ದೇಶದ ಮೊದಲ 'ಇಂಜಿನ್‌ ಲೆಸ್‌' ರೈಲು ತನ್ನ ಮೊದಲ ಪ್ರಯಾಣದಲ್ಲಿ ಮೊರಾದಾಬಾದ್ ಮತ್ತು ಬರೆಲಿಯ ನಡುವೆ ಸಂಚಾರ ನಡೆಸಲಿದ್ದು, ನವೆಂಬರ್ 7 ರಂದು ದೆಹಲಿಯನ್ನು ತಲುಪಿದೆ ಎನ್ನಲಾಗಿದೆ. 

2 /9

ಆಧುನಿಕ ಸೌಕರ್ಯಗಳನ್ನು ಒಳಗೊಂಡ ಎಂಜಿನ್-ರಹಿತ ರೈಲು 18 ಅನ್ನು ಬುಲೆಟ್ ರೈಲು ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಈ ಸಂಪೂರ್ಣ ಗಣಕೀಕೃತ ರೈಲನ್ನು ಶತಾಬ್ದಿ ರೈಲುಗಳಿಗೆ ಬದಲಾಗಿ ಸಂಚರಿಸಲು ನಿರ್ಧರಿಸಲಾಗಿದೆ. ದೇಶದ 20 ಮಾರ್ಗಗಳಲ್ಲಿ ಸಂಚರಿಸುತ್ತಿರುವ ಹಾಗೂ ಎಲ್ಲಾ ಮೆಟ್ರೋ ನಗರಗಳ ನಡುವೆ ಸಂಪರ್ಕ ಸಾಧಿಸಿರುವ ಶತಾಬ್ದಿ ರೈಲಿನ ಗರಿಷ್ಠ ವೇಗ 130 ಕಿ.ಮೀ. ಆಗಿದ್ದರೆ, ಸೆಲ್ಫ್ ಪ್ರೊಪಲ್ಶನ್‌ ತಂತ್ರಜ್ಞಾನದ ಮೂಲಕ ಚಲಿಸುವ 'ಟ್ರೈನ್‌ 18' ರೈಲಿನ ವೇಗ ಗಂಟೆಗೆ 160 ಕಿ.ಮೀ. ಇದೆ. ಹಾಗಾಗಿ, ಶತಾಬ್ದಿಯ ಒಟ್ಟು ಪ್ರಯಾಣಾವಧಿ ಶೇ.10 ರಿಂದ 15ರಷ್ಟು ಸಮಯ ಉಳಿತಾಯ ಆಗಲಿದೆ. 

3 /9

ಈ ರೈಲಿನಲ್ಲಿರುವ ಮುಖ್ಯ ವಿಶೇಷತೆಯೆಂದರೆ ಇತರ ರೈಳುಗಳಂತೆ ಇಂಜಿನ್ ಕಾಣಿಸುವುದಿಲ್ಲ. ಈ ರೈಲಿನ ಮೊದಲ ಬೋಗಿಯಲ್ಲಿ ಡ್ರೈವಿಂಗ್ ಸಿಸ್ಟಂ ಅಳವಡಿಸಲಾಗಿದೆ. ನಂತರ 44 ಆಸನಗಳನ್ನು ಅಳವಡಿಸಲಾಗಿದೆ. ರೈಲಿನ ಮಧ್ಯಭಾಗದಲ್ಲಿ ಎರಡು ಎಕ್ಸಿಕ್ಯುಟೀವ್ ಕೋಚ್ ಗಳನ್ನೂ ಅಳವಡಿಸಲಾಗಿದ್ದು ಇದರಲ್ಲಿ 52 ಆಸನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ಬ್ಹೊಗಿಯಲ್ಲಿ 78 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

4 /9

ಇಂಟಿಗ್ರಲ್ ಕೋಚ್ ಕಾರ್ಖಾನೆಯಲ್ಲಿ ನಿರ್ಮಿಸಲಾದ ಈ ಇಂಜಿನ್ ರಹಿತ ರೈಲು 'ಟ್ರೇನ್ 18' ಗೆ ಬರೋಬ್ಬರಿ 100 ಕೋಟಿ ರೂ.ಗಳನ್ನು ವೆಚ್ಚ ಮಾಡಿ 18 ತಿಂಗಳ ಅವಧಿಯಲ್ಲಿ ತಯಾರಿಸಲಾಗಿದೆ. ಇದೇ ರೈಲನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದೇ ಆಗಿದ್ದರೆ ಇದರ ವೆಚ್ಚ 200 ಕೋಟಿ ರೂ.ಗಳಾಗುತ್ತಿತ್ತು. ಆದರೆ, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ರೈಲು ತಯಾರಿಸಲಾಗಿದ್ದು, ಶೇ.80 ರಷ್ಟು ವೆಚ್ಚ ಕಡಿಮೆಯಾದಂತಾಗಿದೆ. 

5 /9

ಈ ರೈಲಿನ ಹಲವು ಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಆಸನಗಳು ಸಹ ವಿಶಿಷ್ಟತೆಯನ್ನು ಹೊಂದಿದ್ದು, 360 ಡಿಗ್ರಿಗೆ ತಿರುಗಿಸಬಹುದು. ಹಾಗಾಗಿ ಈ ರೈಲಿನ ಪ್ರಯಾಣ ವಿಶೇಷ ಅನುಭವ ನೀಡುತ್ತದೆ. 

6 /9

ಟ್ರೆನ್ 18ನ ಪ್ರತಿ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಚಾಲಕನೊಂದಿಗೆ ಮಾತನಾಡಲು ಟಾಕ್ ಬ್ಯಾಕ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಮೆಟ್ರೋ ರೈಲುಗಳಲ್ಲಿಯೂ ಸಹ ಈ ಸೌಲಭ್ಯವಿದೆ. 

7 /9

ಈ ರೈಲಿನಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೈಲು ನಿಲ್ಲಿಸಲು ಎರಡು ಸ್ವಿಚ್ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ರೈಲಿನಲ್ಲಿ ಉತ್ತಮ ಅನುಭವ ನೀಡುವ ದೃಷ್ಟಿಯಿಂದ ಪ್ರತಿಯೊಂದು ಅಂಶವನ್ನೂ ಗಣನೆಗೆ ತೆಗೆದುಕೊಂಡು ರೈಲು ತಯಾರಿಸಲಾಗಿದೆ. 

8 /9

ಈ ಇಂಜಿನ್ ರಹಿತ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಪ್ರತಿ ಎರಡು ಬೋಗಿಗಳ ನಡುವೆ ಮೋಟರೈಸ್ಡ್ ಇಂಜಿನ್ ಅಳವಡಿಸಿರುವುದರಿಂದ ರೈಲು ಅತಿ ವೇಗವಾಗಿ ಚಲಿಸಲಿದೆಯಲ್ಲದೆ, ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಹೊಂದಿದೆ. ಅಷ್ಟೇ ಅಲ್ಲದೆ, ಈ ರೈಲು ಮುಂದಕ್ಕೆ ಹಾಗೂ ಹಿಂದಕ್ಕೆ ಎರಡೂ ದಿಕ್ಕುಗಳಲ್ಲಿ ಚಲಿಸಲಿದೆ. 

9 /9

ದೀರ್ಘಾವಧಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ರೈಲಿನಲ್ಲಿ ಮನೋರಂಜನಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ವೈ ಫೈ ಸೌಲಭ್ಯ ಮತ್ತು ವ್ಯಾಕ್ಯೂಮ್ ಟಾಯ್ಲೆಟ್ ಸೌಲಭ್ಯವೂ ರೈಲಿನಲ್ಲಿದೆ. ಆರಾಮದಾಯಕ ಪ್ರಯಾಣ ಹಾಗೂ ಲಗೇಜ್ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ.