Odisha train accident Photos : ಒಡಿಶಾದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಬಾಲಾಸೋರ್ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 233 ಕ್ಕೆ ಏರಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪಿಕೆ ಜೆನಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿನ ಅತ್ಯಂತ ಮಾರಣಾಂತಿಕ ರೈಲು ಅಪಘಾತವಾಗಿದ್ದು, ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಬಳಿ ಸಂಭವಿಸಿದೆ. 12864 ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹಲವಾರು ಕೋಚ್‌ಗಳು ಹೌರಾಕ್ಕೆ ಹೋಗುವ ಮಾರ್ಗದಲ್ಲಿ ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಈ ಹಳಿತಪ್ಪಿದ ಬೋಗಿಗಳು 12841 ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾನ ಅದರ ಬೋಗಿಗಳು ಸಹ ಮಗುಚಿ ಬಿದ್ದವು ಎಂದು ಅವರು ತಿಳಿಸಿದ್ದಾರೆ. ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಹಳಿತಪ್ಪಿದ ನಂತರ ಅದರ ವ್ಯಾಗನ್‌ಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಗೂಡ್ಸ್ ರೈಲು ಕೂಡ ಅಪಘಾತದಲ್ಲಿ ಸಿಲುಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಮೊದಲು ಹಳಿತಪ್ಪಿತು ಮತ್ತು ಅದರ 10-12 ಕೋಚ್‌ಗಳು ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಚಲಿಸುತ್ತಿದ್ದ ಮಾರ್ಗದ ಮೇಲೆ ಬಿದ್ದಿದ್ದವು ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ. ತಡರಾತ್ರಿ ಒಡಿಶಾದ ಮುಖ್ಯ ಕಾರ್ಯದರ್ಶಿ ಜೆನಾ ಮೂರು ರೈಲುಗಳು ಅಪಘಾತದಲ್ಲಿ ಸಿಲುಕಿವೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದ್ದರು.
ಬಹನಾಗಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಸಾವನ್ನಪ್ಪಿರುವವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಗೆ ಆದೇಶಿಸಿದ್ದಾರೆ. ಆದ್ದರಿಂದ ಜೂನ್ 3 ರಂದು ರಾಜ್ಯದಾದ್ಯಂತ ಯಾವುದೇ ರಾಜ್ಯ ಆಚರಣೆಯನ್ನು ನಡೆಸಲಾಗುವುದಿಲ್ಲ ಎಂದು ಒಡಿಶಾ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.
ಅಪಘಾತದಲ್ಲಿ ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭುವನೇಶ್ವರದ ಏಮ್ಸ್ ಸೇರಿದಂತೆ ಹತ್ತಿರದ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಅಲರ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ತೆರಳುತ್ತಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ವಾಯುಪಡೆಯನ್ನೂ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭುವನೇಶ್ವರದ ಅಧಿಕಾರಿಗಳು 115 ಆಂಬ್ಯುಲೆನ್ಸ್‌ಗಳು, 50 ಬಸ್‌ಗಳು ಮತ್ತು 45 ಮೊಬೈಲ್ ಆರೋಗ್ಯ ಘಟಕಗಳು ಅಪಘಾತ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ, ಜೊತೆಗೆ 1,200 ಸಿಬ್ಬಂದಿಗಳು. ಟ್ರ್ಯಾಕ್ಟರ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳಲ್ಲಿ ಮೃತದೇಹಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತಿದೆ.
ಗಾಯಾಳುಗಳಿಗೆ ಸಹಾಯ ಮಾಡಲು ರಾತ್ರಿ ಬಾಲಸೋರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2,000 ಕ್ಕೂ ಹೆಚ್ಚು ಜನರು ಜಮಾಯಿಸಿದರು, ಅನೇಕರು ರಕ್ತದಾನ ಮಾಡಿದರು. ಅಪಘಾತ ಸಂತ್ರಸ್ತರಿಗೆ ಅಗತ್ಯದ ಸಮಯದಲ್ಲಿ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಮುಖ್ಯ ಕಾರ್ಯದರ್ಶಿ ಜೆನಾ ಧನ್ಯವಾದ ಅರ್ಪಿಸಿದರು. ಹಳಿತಪ್ಪಿದ ಬೋಗಿಗಳ ಅಡಿಯಿಂದ ಮೃತದೇಹಗಳನ್ನು ಹೊರತರಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗುತ್ತಿದೆ. ಸೈಟ್‌ನಲ್ಲಿನ ಕೆಲವು ದೃಶ್ಯಗಳು ವಿವರಿಸಲು ತುಂಬಾ ಭಯಾನಕವಾಗಿವೆ.
ಡಿಕ್ಕಿಯ ರಭಸಕ್ಕೆ ಕೆಲವು ಬೋಗಿಗಳು ಉಲ್ಟಾ ತಿರುಗಿ ಬಿದ್ದಿವೆ. ಕೆಲವು ಬೋಗಿಗಳು ಇನ್ನೊಂದು ಬೋಗಿಯ ಮೇಲೆ ಕುಳಿತಿವೆ. ರೈಲ್ವೆ ಹಳಿಗಳು ಬಹುತೇಕ ನಾಶವಾಗಿವೆ. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಪಘಾತದ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ರೂ. 50,000 ಹೆಚ್ಚುವರಿ ಪರಿಹಾರವನ್ನು ಘೋಷಿಸಿದ್ದಾರೆ.
ಒಡಿಶಾದಲ್ಲಿ ಸಂಭವಿಸಿದ ಭೀಕರ ಅಪಘಾತದ ಹಿನ್ನೆಲೆಯಲ್ಲಿ ಗೋವಾ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಫ್ಲ್ಯಾಗ್‌ಆಫ್ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ಸರ್ಕಾರವು ಸಹಾಯವಾಣಿ 06782-262286 ಅನ್ನು ಬಿಡುಗಡೆ ಮಾಡಿದೆ. ರೈಲ್ವೆ ಸಹಾಯವಾಣಿಗಳು 033-26382217 (ಹೌರಾ), 8972073925 (ಖರಗ್‌ಪುರ), 8249591559 (ಬಾಲಾಸೋರ್) ಮತ್ತು 044- 25330952 (ಚೆನ್ನೈ).