ಸ್ಯಾಂಡಲ್‌ವುಡ್‌ ʼಪುಟ್ಮಲ್ಲಿʼಗೆ ಹುಟ್ಟುಹಬ್ಬದ ಸಂಭ್ರಮ: ಇಲ್ಲಿದೆ ನೋಡಿ ʼಪದ್ದಿʼಯ ಜೀವನಚರಿತ್ರೆ

ಉಮಾಶ್ರಿಯವರು ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಕಂಡವರು.ಇವರು ಅಭಿನಯದ ಗುಲಾಬಿ ಟಾಕೀಸ್‌ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. 

ಚಂದನವನದ ಪುಟ್ಮಲ್ಲಿ ಎಂದೇ ಪ್ರಖ್ಯಾತಿ ಪಡೆದ ಉಮಾಶ್ರೀಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿ, ರಾಜಕಾರಣಿಯಾಗಿ ಮಿಂಚಿದ ಉಮಾಶ್ರೀಯ ಬಗ್ಗೆ ಅನೇಕರಿಗೆ ಸಾಕಷ್ಟು ವಿಷಯಗಳು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಅಭಿನಯ ಶಾರದೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ  ನೀಡುತ್ತಿದ್ದೇವೆ. 

1 /5

ಉಮಾಶ್ರೀ ಹುಟ್ಟಿದ್ದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ. 1957ರ ಮೇ 10ರಂದು ಜನಿಸಿದ ಉಮಾಶ್ರೀ, ಕಡುಬಡತನದಲ್ಲೇ ಜೀವನ ಸಾಗಿಸಿದವರು. ಸಂದರ್ಶನವೊಂದರಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದ ಅವರು, "ನಾನು ನಾಟಕ ಸೇರಿದ್ದೇ ಚಿತ್ರಾನ್ನ ತಿನ್ನೋದಕ್ಕೆ" ಎಂದು ಹೇಳಿದ್ದರು. ಬಣ್ಣ ಹಚ್ಚಿದರೆ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದ ಉಮಾಶ್ರೀ ಅವರು ರಂಗಭೂಮಿ ಮತ್ತು ಸಿನಿರಂಗದಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. 

2 /5

ರಂಗಭೂಮಿ ಮತ್ತು ಚಂದನವನದಲ್ಲಿ ಉಮಾಶ್ರೀ ಅವರು ಪ್ರಖ್ಯಾತಿ ಗಳಿಸಿದ್ದಾರೆ. ಐತಿಹಾಸಿಕ, ಪೌರಾಣಿಕ, ಕಾಮಿಡಿ ಹೀಗೆ ಯಾವ ಬಗೆಯ ಪ್ರಕಾರಗಳ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಉಮಾಶ್ರೀ ಅವರದ್ದು. ಇನ್ನು  ಬಿ.ವಿ. ಕಾರಂತ್, ನಾಗಾಭರಣ ಹೀಗೆ ಹಲವಾರು ದಿಗ್ಗಜರ ನಿರ್ದೇಶನದಲ್ಲಿ ಮೂಡಿಬಂದ ಅನೇಕ ನಾಟಕಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. 

3 /5

ಇವರ ಸಿನಿ ಜರ್ನಿ ಶುರುವಾಗಿದ್ದು, 1984ರಲ್ಲಿ. ಕಾಶಿನಾಥ್‌ ಅಭಿನಯಿಸಿ, ನಿರ್ದೇಶನ ಮಾಡಿದ್ದ ಅನುಭವ ಸಿನಿಮಾದಲ್ಲಿ ಪದ್ದಿಯಾಗಿ ಜನಮನ ಸೆಳೆದಿದ್ದರು. ಆ ಸಿನಿಮಾದಲ್ಲಿ ಇವರ ಅಭಿನಯ ಕಂಡ ಜನರು ಫಿದಾ ಆಗಿದ್ದಂತು ನಿಜ. ಇನ್ನು ಡಬಲ್‌ ಮೀನಿಂಗ್‌ ಹಾಸ್ಯಕ್ಕಷ್ಟೇ ಸೀಮಿತವಾಗಿದ್ದ ಉಮಾಶ್ರೀ ಬಳಿಕ ಸೀರಿಯಸ್‌ ಪಾತ್ರಗಳಿಗೂ ಬಣ್ಣ ಹಚ್ಚಿದ್ದರು. 

4 /5

1995ರಲ್ಲಿ ತೆರೆಕಂಡ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುಟ್ನಂಜ ಸಿನಿಮಾದಲ್ಲಿ ಪುಟ್ಮಲ್ಲಿಯಾಗಿ ಕಾಣಿಸಿಕೊಂಡ ಉಮಾಶ್ರೀ ನಟನೆ, ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಈ ಸಿನಿಮಾ ಉಮಾಶ್ರೀ ಅವರಿಗೆ ಸಖತ್‌ ಬ್ರೇಕ್‌ ನೀಡಿತು. ಅಷ್ಟೇ ಅಲ್ಲದೆ, ಇಂದಿಗೂ ಕನ್ನಡಿಗರ ಮನದಲ್ಲಿ ಪುಟ್ಮಲ್ಲಿಯಾಗಿಯೇ ಉಳಿದಿದ್ದಾರೆ. ಇನ್ನು ಉಮಾಶ್ರಿಯವರು ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಕಂಡವರು. ಇವರ ಅಭಿನಯದ ಗುಲಾಬಿ ಟಾಕೀಸ್‌ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. 

5 /5

 ಸಿನಿರಂಗ ಮಾತ್ರವಲ್ಲದೆ ರಾಜಕೀಯದಲ್ಲೂ ಛಾಪು ಮೂಡಿಸಿರುವ ಉಮಾಶ್ರೀ ಕಾಂಗ್ರೆಸ್‌ ಪಕ್ಷದ ಸದಸ್ಯೆ. ಇವರು ಶಾಸಕಿಯಾಗಿ ಮತ್ತು ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಪುಟ್ಟಕ್ಕನ ಮಕ್ಕಳು ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.