ʼಶಂಕರಾಭರಣʼ ಸೃಷ್ಟಿಸಿ ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಉಡುಗೂರೆ ನೀಡಿದ್ದ ನಿರ್ದೇಶಕ ಕೆ. ವಿಶ್ವನಾಥ್ ಅವರ ಅಗಲಿಗೆ ಮನಸ್ಸಿನಿಂದ ಮರೆಯಾಗುವ ಮುನ್ನವೇ ಗಾನ ಕೋಗಿಲೆ ಪದ್ಮಭೂಷಣ ವಾಣಿ ಜಯರಾಮ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದಂತಹ ನಷ್ಟವನ್ನುಂಟುಮಾಡಿದೆ. ʼತೆರೆದಿದೆ ಮನೆ ಓ ಬಾ ಅತಿಥಿʼ ಎನ್ನುತ್ತಲೇ ಕರುನಾಡಿನ ಜನರ ಮನದಲ್ಲಿ ಭಾವನಾತ್ಮಕವಾಗಿ ಬೆರೂರಿದ್ದ ಸುಮಧುರ ʼವಾಣಿʼ ಇಂದು ಮರೆಯಾಗಿದೆ.
ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಇಂದು (ಫೆ 4) ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಅವರ ಮನೆಯಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ವಾಣಿ ಅವರ ಜನ್ಮ ಹೆಸರು ಕಲೈವಾಣಿ. ಅವರು ತಮಿಳು, ಮಲಯಾಳಂ, ತೆಲುಗು, ಕನ್ನಡ, ಮರಾಠಿ, ಒಡಿಯಾ, ಗುಜರಾತಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಸೇರಿದಂತೆ ಒಟ್ಟು 19 ಭಾಷೆಗಳಲ್ಲಿ ಸುಮಾರು 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಗೂ 1000 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ.