ಗಡಾಫಿಯ ಮಹಿಳಾ ಅಂಗರಕ್ಷಕ ಪಡೆಯ ಇತಿಹಾಸ

ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು. 

Written by - Girish Linganna | Last Updated : Jan 16, 2024, 10:22 AM IST
  • 1998ರಲ್ಲಿ, ಲಿಬಿಯಾದ ಡೆರ್ನಾದಲ್ಲಿ ಗಡಾಫಿಯ ಬೆಂಗಾವಲು ಪಡೆಯ ಮೇಲೆ ತೀವ್ರವಾದಿಗಳು ದಾಳಿ ನಡೆಸಿದ್ದರು.
  • ರೆವಲ್ಯೂಷನರಿ ನನ್ಸ್ ಪಡೆಯ ಅಂಗರಕ್ಷಕಿಯೊಬ್ಬಳು ಧೈರ್ಯವಾಗಿ ಈ ದಾಳಿಯ ಸಂದರ್ಭದಲ್ಲಿ ಗಡಾಫಿಗೆ ರಕ್ಷಣೆ ಒದಗಿಸಿ, ತಾನು ಗಂಭೀರವಾಗಿ ಗಾಯಗೊಂಡಿದ್ದಳು.
  • ಅಂದು ಗಡಾಫಿಯ ರಕ್ಷಣಾ ಕಾರ್ಯದಲ್ಲಿ ಇನ್ನೂ ಏಳು ಜನರು ಗಾಯಗೊಂಡಿದ್ದರು.
ಗಡಾಫಿಯ ಮಹಿಳಾ ಅಂಗರಕ್ಷಕ ಪಡೆಯ ಇತಿಹಾಸ title=

ರೆವಲ್ಯೂಷನರಿ ನನ್ಸ್, ಅಥವಾ ಯುರೋಪಿನಲ್ಲಿ ಅಮೆಜಾನ್ಸ್ ಹಾಗೂ ಉತ್ತರ ಆಫ್ರಿಕಾದಲ್ಲಿ ಹಾರಿಸ್ ಅಲ್ ಹಾಸ್ ಎಂದು ಗುರುತಿಸಲಾಗಿರುವ ಮಹಿಳಾ ತಂಡ, ಲಿಬಿಯಾದ ಮಾಜಿ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿಯ ರಕ್ಷಣೆಗೆ ನೇಮಕಗೊಂಡಿದ್ದ ಮಹಿಳಾ ತಂಡವಾಗಿತ್ತು. ಈ ತಂಡದ ಪ್ರಮುಖ ಉದ್ದೇಶ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಗಡಾಫಿಯನ್ನು ಸುರಕ್ಷಿತವಾಗಿಡುವುದಾಗಿತ್ತು.

1980ರ ದಶಕದ ಆರಂಭದಲ್ಲಿ, ಲಿಬಿಯಾದ ನಾಯಕನಾಗಿದ್ದ ಮುಅಮ್ಮರ್ ಗಡಾಫಿ ಸಂಪೂರ್ಣವಾಗಿ ಮಹಿಳೆಯರನ್ನೇ ಹೊಂದಿದ್ದ ಅಂಗರಕ್ಷಕರ ಪಡೆಯನ್ನು ನಿರ್ಮಿಸಿದ. ಇದಕ್ಕೂ ಮೊದಲು ಗಡಾಫಿ ರಕ್ಷಣೆಯನ್ನು ಈಸ್ಟ್ ಜರ್ಮನ್ ಸೀಕ್ರೆಟ್ ಸರ್ವಿಸಸ್ ಸಂಸ್ಥೆ ನಿರ್ವಹಿಸುತ್ತಿತ್ತು. ಆತನ ಬಹುತೇಕ ಅಂಗರಕ್ಷಕರು ಬಲ್ಗೇರಿಯ, ಜರ್ಮನಿ, ಹಾಗೂ ಪೋಲ್ಯಾಂಡ್‌ಗಳಿಂದ ಆಯ್ಕೆಗೊಳ್ಳುತ್ತಿದ್ದರು.

ಗಡಾಫಿ ಪ್ರವಾಸಕ್ಕೆ ತೆರಳುವ ಸಂದರ್ಭಗಳಲ್ಲಿ, ಆತ ತನ್ನೊಡನೆ ಕನಿಷ್ಠ 15 ಜನ ರೆವಲ್ಯೂಷನರಿ ನನ್ಸ್ ಎಂಬ ಮಹಿಳಾ ಅಂಗರಕ್ಷಕ ಪಡೆಯ ಸದಸ್ಯರನ್ನು ಕರೆದೊಯ್ಯುತ್ತಿದ್ದ. ಅವರಿಗೆ ಪ್ರವಾಸಗಳಲ್ಲಿ ಗಡಾಫಿಯನ್ನು ರಕ್ಷಿಸುವ, ಅಥವಾ ಮನೆ ಕೆಲಸ ನಡೆಸುವ ಜವಾಬ್ದಾರಿ ನೀಡಲಾಗುತ್ತಿತ್ತು. ಆದರೆ, ಲಿಬಿಯಾದಲ್ಲಿ ಪರಿಸ್ಥಿತಿ ಸಂಪೂರ್ಣ ವಿಕೋಪಕ್ಕೆ ತಿರುಗಿ, ತಾನು ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾದಾಗ ಗಡಾಫಿ ರೆವಲ್ಯೂಷನರಿ ನನ್ಸ್ ಅನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದ. ಅದಾದ ಬಳಿಕ ಅವರಲ್ಲಿ ಬಹುತೇಕರು ಕಣ್ಮರೆಯಾಗಿ, ತಮ್ಮನ್ನು ತಾವು ಲೋಕದ ಕಣ್ಣಿನಿಂದ ಬಚ್ಚಿಟ್ಟುಕೊಂಡರು.

ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು. ಆದರೆ, ಗಡಾಫಿಯ ಕುರಿತು ತಿಳಿದಿದ್ದ ಬಹಳಷ್ಟು ಜನರ ಪ್ರಕಾರ, ಗಡಾಫಿ ಯುವ ಮಹಿಳೆಯರ ಜೊತೆ ಸಮಯ ಕಳೆಯುವುದನ್ನು ಹೆಚ್ಚು ಇಷ್ಟಪಡುತ್ತಿದ್ದ.

1975ರಲ್ಲಿ, ಗಡಾಫಿ ಗ್ರೀನ್ ಬುಕ್ ಎಂಬ ಹೆಸರಿನ ಪುಸ್ತಕ ಒಂದನ್ನು ಬರೆದಿದ್ದ. ಅದರಲ್ಲಿ ಆತ ತನ್ನ ರಾಜಕೀಯ ಆಲೋಚನೆಗಳನ್ನು ವಿವರಿಸಿದ್ದ. ಆತ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ, ಆತನ ಪುಸ್ತಕವನ್ನು ಶಾಲೆಗಳಲ್ಲಿ ಪಾಠ ಮಾಡಲಾಗುತ್ತಿತ್ತು. ಗಡಾಫಿಯ ಹೇಳಿಕೆಗಳನ್ನು ಲಿಬಿಯಾದಾದ್ಯಂತ ಪ್ರದರ್ಶಿಲಾಗುತ್ತಿತ್ತು. ತನ್ನ ಪುಸ್ತಕದ ಒಂದು ಭಾಗದಲ್ಲಿ ಗಡಾಫಿ ಸಮಾಜದಲ್ಲಿ ಮಹಿಳೆಯರ ಸ್ಥಾನದ ಕುರಿತು ಮಾತನಾಡಿದ್ದ. ಆತ ಪುರುಷರು ಮತ್ತು ಮಹಿಳೆಯರು ಹುಟ್ಟುತ್ತಾ ಸಮಾನರೇ ಆಗಿರುತ್ತಾರೆ, ಆದರೆ ನೈಸರ್ಗಿಕವಾಗಿ ಭಿನ್ನವಾಗಿರುತ್ತಾರೆ. ಇಂತಹ ಭಿನ್ನತೆಗಳ ಕಾರಣದಿಂದ, ದೈನಂದಿನ ಜೀವನದಲ್ಲಿ ಅವರ ಪಾತ್ರಗಳೂ ಭಿನ್ನವಾಗಿರುತ್ತವೆ ಎಂದಿದ್ದ. ಮಹಿಳೆಯರು ಕೆಲಸ ಮಾಡಬಹುದು ಎಂದಿದ್ದ ಗಡಾಫಿ, ಆದರೆ ಆ ಕೆಲಸಗಳು ಅವರ ಸೌಂದರ್ಯಕ್ಕೆ ಧಕ್ಕೆ ತರುವಂತಿರಬಾರದು ಮತ್ತು ಪುರುಷರಿಗಿಂತಲೂ ಅವರಿಗೇ ಸೂಕ್ತವಾಗಿರಬೇಕು ಎಂದಿದ್ದ. ಅಂದರೆ, ಮಹಿಳೆಯರು ಮಹಿಳೆಯರಿಗೆ ಪೂರಕವಾದ ಕೆಲಸಗಳನ್ನು ಮಾತ್ರವೇ ಮಾಡಬೇಕು ಎನ್ನುವುದು ಗಡಾಫಿಯ ಅಭಿಪ್ರಾಯವಾಗಿತ್ತು. ಇದಕ್ಕೆ ಮಹಿಳೆಯರು ಮತ್ತು ಪುರುಷರ ದೈಹಿಕ ಮತ್ತು ನೈಸರ್ಗಿಕ ಭಿನ್ನತೆಗಳು ಕಾರಣ ಎಂದು ಆತ ಭಾವಿಸಿದ್ದ.

ಲಿಬಿಯಾದ ಸರ್ವಾಧಿಕಾರಿ ತನ್ನ ಪುಸ್ತಕದಲ್ಲಿ ಏನೇ ಬರೆದಿದ್ದರೂ, ಹೆಣ್ಣು ಮಕ್ಕಳಿಗೆ ಸಮರ ಕಲೆಗಳನ್ನು ಕಲಿಸಬೇಕು ಎಂದು ಬಲವಾಗಿ ನಂಬಿದ್ದ. ಇದರಿಂದಾಗಿ ಶತ್ರುಗಳು ಮಹಿಳೆಯರನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎನ್ನುವುದು ಆತನ ಅಭಿಪ್ರಾಯವಾಗಿತ್ತು. ಆತನ ಪ್ರಕಾರ, ಮಹಿಳಾ ಅಂಗರಕ್ಷಕರನ್ನು ಹೊಂದುವುದರಿಂದ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಸಾಧ್ಯವಾಗುತ್ತದೆ ಎಂದಿತ್ತು. ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹಿಡಿದಿದ್ದಾಗ, ಮಹಿಳೆಯರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ತೆರಳಲು ಅನುಮತಿ ಇತ್ತು. ಅವರಿಗೆ ಪೊಲೀಸ್ ಅಧಿಕಾರಿಗಳಾಗಿ, ವೈದ್ಯರಾಗಿ, ದಾದಿಯರಾಗಿ, ಅಥವಾ ಇಂಜಿನಿಯರ್‌ಗಳಾಗಿ ಕಾರ್ಯಾಚರಿಸಲು ಅನುಮತಿ ಇತ್ತು.

ಗಡಾಫಿಗೆ ಮುನ್ನ ಲಿಬಿಯಾವನ್ನು ಕಿಂಗ್ ಇದ್ರಿಸ್ ಆಳ್ವಿಕೆ ನಡೆಸುತ್ತಿದ್ದ ಅವಧಿಯಲ್ಲಿ, ಕೇವಲ 15% ಹೆಣ್ಣುಮಕ್ಕಳು ಮಾತ್ರವೇ ಪ್ರಾಥಮಿಕ ಶಾಲೆಗೆ ತೆರಳುತ್ತಿದ್ದರು. ಆದರೆ 1969ರಲ್ಲಿ ಗಡಾಫಿ ಅಧಿಕಾರಕ್ಕೆ ಬಂದ ಬಳಿಕ, ಒಂಬತ್ತು ವರ್ಷದ ತನಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ. ಇದರಿಂದಾಗಿ ಓದಲು ಬರೆಯಲು ಬರುವ ಮಹಿಳೆಯರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿತು. 1990ರ ವೇಳೆಗೆ, 48% ಹೆಣ್ಣುಮಕ್ಕಳು ಪ್ರಾಥಮಿಕ ಶಾಲೆಗೆ ತೆರಳುತ್ತಿದ್ದರು. 1996ರಲ್ಲಿ 43% ಹೆಣ್ಣುಮಕ್ಕಳು ಪ್ರೌಢಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿದ್ದರು. 2011ರಲ್ಲಿ ಗಡಾಫಿ ಸಾವನ್ನಪ್ಪಿದ ಸಮಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸುತ್ತಿದ್ದವರಲ್ಲಿ 50%ಕ್ಕೂ ಹೆಚ್ಚು ಹೆಣ್ಣುಮಕ್ಕಳೇ ಆಗಿದ್ದರು.

ರೆವಲ್ಯೂಷನರಿ ಗಾರ್ಡ್ಸ್ ಪಡೆಯ ಮಹಿಳಾ ಸದಸ್ಯರ ಪ್ರಾಥಮಿಕ ಕಾರ್ಯ ಹಗಲು ರಾತ್ರಿ ಗಡಾಫಿಯ ಸುರಕ್ಷತೆ ಕಾಯ್ದುಕೊಳ್ಳುವುದಾಗಿತ್ತು. ಅದರೊಡನೆ, ಅವರು ಗಡಾಫಿಗೆ ಮನರಂಜನೆ ನೀಡಬೇಕಿತ್ತು, ಗ್ರೀನ್ ಬುಕ್‌ನಿಂದ ವಿಚಾರಗಳನ್ನು ಓದಿ ಹೇಳಬೇಕಿತ್ತು ಮತ್ತು ಮನೆಯನ್ನು ಸ್ವಚ್ಛವಾಗಿಡಬೇಕಿತ್ತು. ಮುಅಮ್ಮರ್ ಗಡಾಫಿ ರೆವಲ್ಯೂಷನರಿ ನನ್ಸ್ ಪಡೆಗೆ ಯುವತಿಯರನ್ನು ಸ್ವತಃ ತಾನೇ ಆಯ್ಕೆ ಮಾಡುತ್ತಿದ್ದ. ಅವರು ಅಂದಾಜು 20 ವರ್ಷ ವಯಸ್ಸಿನವರಾಗಿರಬೇಕಿತ್ತು, ನೋಡಲು ಆಕರ್ಷಕವಾಗಿಯೂ, ಕನ್ಯೆಯರೂ ಆಗಿರಬೇಕಿತ್ತು. ಅವರು ತಮ್ಮ ಅಧಿಕೃತ ತರಬೇತಿಯನ್ನು ಆರಂಭಿಸುವ ತನಕವೂ ಲೈಂಗಿಕ ಚಟುವಟಿಕೆಗಳನ್ನು ನಡೆಸುವುದರಿಂದ ದೂರ ಇರಬೇಕಾಗಿತ್ತು.

ರೆವಲ್ಯೂಷನರಿ ನನ್ಸ್ ಪಡೆಯ ತರಬೇತಿಯಲ್ಲಿ, ಸಮರ ಕಲೆಯ ಶಿಕ್ಷಣ, ಶಸ್ತ್ರಾಸ್ತ್ರ ತರಬೇತಿಗಳು ಸೇರಿದ್ದವು. ಅವರಿಗೆ ಬಹುತೇಕ ತರಬೇತಿಯನ್ನು ಟ್ರಿಪೋಲಿಯ ಮಹಿಳಾ ಪೊಲೀಸ್ ಅಕಾಡೆಮಿಯಲ್ಲಿ ನೀಡಲಾಗುತ್ತಿತ್ತು. ತರಬೇತಿ ಪೂರ್ಣಗೊಂಡ ಬಳಿಕ, ಅವರು ಎಂತಹ ಪರಿಸ್ಥಿತಿಯಲ್ಲೂ ಗಡಾಫಿಯ ರಕ್ಷಣೆ ನಡೆಸುವ ಪ್ರತಿಜ್ಞೆ ಕೈಗೊಳ್ಳುತ್ತಿದ್ದರು. ಇದಕ್ಕಾಗಿ ಅಗತ್ಯ ಬಿದ್ದರೆ ತಮ್ಮ ಪ್ರಾಣವನ್ನೂ ಅರ್ಪಿಸುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದರು. ರೆವಲ್ಯೂಷನರಿ ನನ್ಸ್ ಕಪ್ಪು ಹೈ ಹೀಲ್ಸ್, ಕೆಂಪು ಬೆಲ್ಟ್, ಮತ್ತು ಕೆಂಪು ಬಣ್ಣದ ತಲೆಯ ಟೋಪಿಯನ್ನು ಒಳಗೊಂಡಿದ್ದ ಸಮವಸ್ತ್ರವನ್ನು ಧರಿಸುತ್ತಿದ್ದರು. ಅವರಿಗೆ ಒಡವೆ ಧರಿಸಲು, ಕೆಂಪು ತುಟಿ ಬಣ್ಣ ಹಚ್ಚಿಕೊಳ್ಳಲು, ಉಗುರಿಗೆ ಬಣ್ಣ ಹಚ್ಚಿಕೊಳ್ಳಲು ಅನುಮತಿ ನೀಡಲಾಗಿತ್ತು.

ಈ ರೆವಲ್ಯೂಷನರಿ ನನ್ಸ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 1981ರಲ್ಲಿ ಸಿರಿಯಾದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ, ಗಡಾಫಿ ಸಿರಿಯಾ ಅಧ್ಯಕ್ಷ ಹಫೀಜ್ ಅಲ್ ಸಯೀದ್ ಜೊತೆ ಭೇಟಿ, ಮಾತುಕತೆಗೆ ತೆರಳಿದ್ದ.

1998ರಲ್ಲಿ, ಲಿಬಿಯಾದ ಡೆರ್ನಾದಲ್ಲಿ ಗಡಾಫಿಯ ಬೆಂಗಾವಲು ಪಡೆಯ ಮೇಲೆ ತೀವ್ರವಾದಿಗಳು ದಾಳಿ ನಡೆಸಿದ್ದರು. ರೆವಲ್ಯೂಷನರಿ ನನ್ಸ್ ಪಡೆಯ ಅಂಗರಕ್ಷಕಿಯೊಬ್ಬಳು ಧೈರ್ಯವಾಗಿ ಈ ದಾಳಿಯ ಸಂದರ್ಭದಲ್ಲಿ ಗಡಾಫಿಗೆ ರಕ್ಷಣೆ ಒದಗಿಸಿ, ತಾನು ಗಂಭೀರವಾಗಿ ಗಾಯಗೊಂಡಿದ್ದಳು. ಅಂದು ಗಡಾಫಿಯ ರಕ್ಷಣಾ ಕಾರ್ಯದಲ್ಲಿ ಇನ್ನೂ ಏಳು ಜನರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ರೆವಲ್ಯೂಷನರಿ ನನ್ಸ್ ಪಡೆಯ ಮುಖ್ಯ ಅಂಗರಕ್ಷಕಿಯಾಗಿದ್ದ ಆಯಿಷಾ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಳು.

ನವೆಂಬರ್ 2006ರಲ್ಲಿ, ಗಡಾಫಿ ನೈಜೀರಿಯಾದ ಅಬುಜಾ ವಿಮಾನ ನಿಲ್ದಾಣದಲ್ಲಿ ಬಹುತೇಕ 200 ಶಸ್ತ್ರಸಜ್ಜಿತ ಅಂಗರಕ್ಷಕರೊಡನೆ ಬಂದಿಳಿದಿದ್ದ. ಆದರೆ ಅವರು ಅಲ್ಲಿಗೆ ಬಂದ ಸಂದರ್ಭದಲ್ಲಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಅವರನ್ನು ಆಯುಧಗಳೊಡನೆ ಒಳ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಇದರಿಂದ ಗಡಾಫಿ ಬಹಳಷ್ಟು ಕೋಪಗೊಂಡಿದ್ದ. ಈ ಸಮಯದಲ್ಲಿ ಗಡಾಫಿ ಅಂಗರಕ್ಷಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಸಣ್ಣ ಜಗಳವೂ ಸಂಭವಿಸಿತು. ಇದರಿಂದ ಗಡಾಫಿ ಬಹಳಷ್ಟು ಬೇಸರಗೊಂಡು, ತಾನು ರಾಜಧಾನಿಗೆ ನಡೆದೇ ತೆರಳಲು ಸಿದ್ಧ ಎಂದಿದ್ದ. ಆಗಿನ ನೈಜೀರಿಯಾ ಅಧ್ಯಕ್ಷ ಒಲುಸೆಗುನ್ ಒಬಸಂಜೊ ಮಧ್ಯ ಪ್ರವೇಶಿಸಿದ ಬಳಿಕವೇ ಈ ಸಮಸ್ಯೆ ಪರಿಹಾರ ಕಂಡಿತ್ತು.

ಜೂನ್ 2009ರಲ್ಲಿ ಇಟಲಿಗೆ ತೆರಳಿದ ಸಂದರ್ಭದಲ್ಲಿ, ಗಡಾಫಿ ತನ್ನೊಡನೆ 300 ಅಂಗರಕ್ಷಕರನ್ನು ಕರೆದೊಯ್ದಿದ್ದ. ಆತ ಅಲ್ಲಿದ್ದ ಸಂದರ್ಭದಲ್ಲಿ ರೋಮ್ ನಗರದ ಮಧ್ಯದಲ್ಲಿ ಸ್ಥಾಪಿಸಲಾಗಿದ್ದ ಬೆದೂಯಿನ್ ಟೆಂಟ್‌ನಲ್ಲಿ ವಾಸವಾಗಿದ್ದ. ಬೆದೂಯಿನ್ ಟೆಂಟ್ ಎನ್ನುವುದು ಒಂದು ಅತ್ಯಂತ ದೊಡ್ಡದಾದ, ಬೆದೂಯಿನ್ ಎಂಬ ಅರಬ್ ಜಗತ್ತಿನ ಮರುಭೂಮಿಯ ವಲಸಿಗ ಜನಾಂಗದವರು ಬಳಸುವ ಸಾಂಪ್ರದಾಯಿಕ ಡೇರೆಯಾಗಿದೆ. ಈ ಡೇರೆಗಳು ಸಾಕಷ್ಟು ದೊಡ್ಡದಾಗಿದ್ದು, ದಪ್ಪನೆಯ ಬಟ್ಟೆಗಳಿಂದ ನಿರ್ಮಿಸಲ್ಪಟ್ಟಿರುತ್ತವೆ. ಅವುಗಳು ಮರುಭೂಮಿಯ ಮರಳು ಮತ್ತು ಉಷ್ಣತೆಯಿಂದ ರಕ್ಷಣೆ ನೀಡುತ್ತವೆ. ಇವು ಬೆದೂಯಿನ್ ಸಂಸ್ಕೃತಿಯ ಅಂಗವಾಗಿದ್ದು, ಅವರ ಆತಿಥ್ಯ ಮತ್ತು ವಲಸಿಗ ಜೀವನ ಶೈಲಿಯನ್ನು ಪ್ರತಿನಿಧಿಸುತ್ತವೆ.

ರೆವಲ್ಯೂಷನರಿ ನನ್ಸ್ ಪಡೆಯ ಬಹಳಷ್ಟು ಮಹಿಳೆಯರನ್ನು ಅವರ ಪತಿ ಮತ್ತು ಕುಟುಂಬಸ್ಥರು ತಿರಸ್ಕರಿಸಿದ್ದರು. 2001ರಲ್ಲಿ, ಡಾ. ಸೆಹಮ್ ಸೆರ್ಗೆವಾ ಎಂಬ ಲಿಬಿಯನ್ ಮನಶಾಸ್ತ್ರಜ್ಞರು ಹೇಗೆ ರೆವಲ್ಯೂಷನರಿ ನನ್ಸ್ ಆಯ್ಕೆಯಾಗುತ್ತಿದ್ದರು ಎಂಬ ಅಧ್ಯಯನ ನಡೆಸಲು ಆರಂಭಿಸಿದರು. ಆದರೆ ಈ ಮಹಿಳೆಯರು ಸಾಕಷ್ಟು ಭಯ ಪಡುತ್ತಿದ್ದರಿಂದ, ಕೇವಲ ಎಂಟು ಜನ ಮಹಿಳೆಯರಷ್ಟೇ ಈ ಕುರಿತು ಮಾತನಾಡಲು ಮುಂದೆ ಬಂದರು. ಅವರಿಗೆ ತೀವ್ರವಾದಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ತಮ್ಮ ಕುಟುಂಬಸ್ಥರೇ ದಾಳಿ ನಡೆಸಿದರೆ ಎಂಬ ಭಯವಿತ್ತು.

ಕೆಲವು ಮಹಿಳೆಯರು ಗಡಾಫಿಯನ್ನು ಮಹಿಳಾ ವಿಮೋಚಕ ಎಂದು ಶ್ಲಾಘಿಸಿದರೆ, ಆತ ಮೃತಪಟ್ಟ ಬಳಿಕ ಹಲವು ಮಹಿಳೆಯರು ಆತನ ವಿರುದ್ಧ ಅತ್ಯಾಚಾರ ಮತ್ತು ಹಿಂಸೆಯ ಆರೋಪ ಮಾಡಿದ್ದರು. ಹಲವು ಮಹಿಳೆಯರು ತಮ್ಮನ್ನು ಈ ಪಡೆಗೆ ಸೇರುವಂತೆ ಬಲವಂತ ಪಡಿಸಲಾಯಿತು ಅಥವಾ ಇದಕ್ಕೆ ಸೇರ್ಪಡೆಯಾಗಲು ಲೈಂಗಿಕ ಚಟುವಟಿಕೆ ನಡೆಸುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ. ಅವರು ಗಡಾಫಿ ಮತ್ತು ಆಡಳಿತ ವಲಯದಲ್ಲಿ ಆತನ ಸಮೀಪವರ್ತಿಗಳು ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾಗಿ ಆರೋಪಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News