ಹೆಗಲಿಗೊಂದು ಚೀಲ, ನಡಕ್ಕೊಂದು(ನಡುವಿಗೊಂದು) ಕೂಡಗೋಲು ಧರಿಸಿ ಪಶ್ಚಿಮ ಘಟ್ಟದ ಗಿಡದ ಕೊಂಬೆಗಳ ಪ್ರತಿನಾಡಿಯನ್ನು ಹಿಡಿಯುವ ಛಾತಿ ಇಲ್ಲಿನ ಹಸಲರದು. ಈ ಸಮುದಾಯ ಹೆಚ್ಚಾಗಿ ಪಶ್ಚಿಮ ಘಟ್ಟದ ಶಿವಮೊಗ್ಗದ ಸಾಗರ, ಹೊಸ ನಗರ ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳನ್ನು ನಾವು ಅವರ ನೆಲೆವಿಡು ಎಂದೇ ಕರೆಯಬಹುದು.
ಆದಿವಾಸಿಗಳಾಗಿರುವ ಈ ಸಮುದಾಯ ಪಶ್ಚಿಮ ಘಟ್ಟದ ಅಡಕೆಯ ತೋಟಗಳಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಚಕ ಚಕೆನೆ ಅಡಕೆಯ ಮರ ಹತ್ತುವ ಕಲೆ ನಿಜಕ್ಕೂ ಒಂದು ಕ್ಷಣ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ಶ್ರಮದಾಯಿ ಜೀವಿಗಳಾಗಿರುವ 'ಹಸಲರು' ಬಹುತೇಕ ತಮ್ಮ ಹೆಚ್ಚಿನ ಸಮಯವನ್ನು ಗದ್ದೆ ಅಥವಾ ತೋಟಗಳಲ್ಲೇ ಕಳೆಯುತ್ತಾರೆ ಎನ್ನವುದು ಪ್ರಮುಖ ಸಂಗತಿ. ಹಸಲರು ಬುಡಕಟ್ಟು ಜನಾಂಗದ ತ್ಯಾಗ ಮತ್ತು ಶ್ರಮದ ಪ್ರತಿಫಲವಾಗಿ ಶಿವಮೊಗ್ಗ ಜಿಲ್ಲೆಯ 'ಲಿಂಗನಮಕ್ಕಿ ಅಣೆಕಟ್ಟೆಯು' ನಿರ್ಮಾಣಗೊಂಡಿದೆ.
ಬಹುತೇಕ ಹಸಲರ ಸಮುದಾಯಗಳು 1964ರಲ್ಲಿ ಇಲ್ಲಿನ ಪ್ರಮುಖ ತಳಕಳಲೆ ಮತ್ತು ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ಹಸಲರ ಇಂಥಹ ತ್ಯಾಗದ ಪ್ರತಿಫಲದಿಂದಾಗಿ ಇಲ್ಲಿನ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಆದರೆ ಹಸಲರು ಒಂದು ಕಡೆ ಕೃತಕವಾದ ಹಿನ್ನಿರಿನಲ್ಲಿ ಸೃಷ್ಟಿಯಾದ ನಡುಗಡ್ಡೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ 'ದ್ವೀಪ' ಚಿತ್ರವು ಬುಡಕಟ್ಟು ಜನರ ಕಥನವನ್ನು ಈ ಲಿಂಗನಮಕ್ಕಿಯ ಅಣೆಕಟ್ಟಿನ ಹಿನ್ನಲೆಯಾಗಿ ಹುಟ್ಟಿಕೊಂಡ ಅವರ ಸಮಸ್ಯೆಗಳ ಕುರಿತಾಗಿ ಹೇಳುತ್ತದೆ.