ಕರ್ನಾಟಕದ ಜನಪದ ಕಲೆಗಳಲ್ಲಿ ಕಂಸಾಳೆಯು ಅನನ್ಯತೆಯನ್ನು ಹೊಂದಿದೆ. ಇದು ಮಹದೇಶ್ವರನ ಭಕ್ತ ವೃಂದದವರಿಂದ ಪ್ರಾರಂಭಿಸಲ್ಪಟ್ಟ ಜಾನಪದ ಕಲೆ. 'ದೇವರ ಗುಡ್ಡರು' ಬಳಸುವ ವಿಶೇಷ ವಾದ್ಯ. ಮೈಸೂರು, ಮಂಡ್ಯ, ಕೊಳ್ಳೇಗಾಲ, ನಂಜನಗೂಡು ಪ್ರದೇಶಗಳಲ್ಲಿ ಈ ಕಲೆ ಇಂದಿಗೂ ಜೀವಂತವಾಗಿದೆ. ವಾಹನ ಸಂಚಾರ ಕಡಿಮೆ ಇದ್ದ ಆ ದಿನಗಳಲ್ಲಿ ಜನರು ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಗುಂಪು ಗುಂಪಾಗಿ ಸಾಗುತ್ತಿದ್ದರು. ದಟ್ಟ ಅರಣ್ಯದಲ್ಲಿ ಹೀಗೆ ಸಾಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಕಂಚಿನಿಂದ ಮಾಡಿದ ಜೋಡಿ ಕಂಸಾಳೆಯನ್ನು ಬಳಸುತ್ತಿದ್ದರು. ಕಂಸಾಳೆಯನ್ನು ಕೈಯಲ್ಲಿ ಹಿಡಿದು ತಾಳ ಹಾಕುತ್ತ, ಶಿವ-ಶರಣರ ಮಹಿಮೆಗಳನ್ನು ಹಾಡುತ್ತಾ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪ್ರಯಾಣ ಮಾಡುತ್ತಿದ್ದರು. ಹೀಗೆ ಪ್ರಾರಂಭವಾದ ಕಲೆಯು ಈಗ ನಾಗರೀಕತೆ ಬೆಳೆದ ಮೇಲೂ ತನ್ನ ಕಸುವು ಕಂಪನ್ನು ಉಳಿಸಿಕೊಂಡಿದೆ.
ಪುರುಷರು ಹಳದಿ ಮತ್ತು ಕೆಂಪು ಬಣ್ಣದ ವಸ್ತ್ರ ಧರಿಸಿ ಕಂಸಾಳೆ ತಾಳಕ್ಕೆ ನೃತ್ಯ ಮಾಡುತ್ತಾರೆ. ಸಾಮಾನ್ಯವಾಗಿ ಮೂವರಿಂದ ಎಂಟು ಜನ ಈ ಮೇಳದಲ್ಲಿ ಭಾಗವಹಿಸುತ್ತಾರೆ. ಮಹಾದೇವನೆ 'ಬೀಸು ಕಂಸಾಳೆ'ಯ ಪ್ರವರ್ತಕ ಎಂಬುದು ಭಕ್ತರ ನಂಬಿಕೆ. ಭಕ್ತರು ಕಂಸಾಳೆ ಬೀಸುತ್ತಾ ನೃತ್ಯ ಪ್ರದರ್ಶನ ನೀಡುತ್ತಾರೆ. ಈ ಕಲಾ ಪ್ರಕಾರದಲ್ಲಿ ತಂಡದ ನೃತ್ಯಗಾರರ ನಡುವಿನ ಸಮನ್ವಯ ಮತ್ತು ಸಹಕಾರ ಬಹಳ ಮುಖ್ಯವುದುದು. ಒಬ್ಬನೇ ಒಬ್ಬ ನೃತ್ಯಗಾರ ಒಂದು ತಾಳವನ್ನು ತಪ್ಪಿಸಿದರೂ ಇಡೀ ನೃತ್ಯ ಹಾದಿತಪ್ಪುತ್ತದೆ.
'ಕುಳಿತು ಹಾಡುವ' ಕಂಸಾಳೆಯಲ್ಲಿ ಪ್ರಧಾನ ಹಾಡುಗಾರನು ಮಧ್ಯದಲ್ಲಿದ್ದು ಸಹ ಕಲಾವಿದರು ಸುತ್ತಲೂ ಇರುತ್ತಾರೆ. ವಾದ್ಯಕ್ಕೆ ಅನುಗುಣವಾಗಿ ಹಾಡುತ್ತ ದನಿಗೂಡಿಸುತ್ತಾರೆ. ಕಥೆಯ ಸಂಭಾಷಣೆಗೆ ತಕ್ಕಂತೆ ನಡೆಯುವಾಗ ಉಳಿದವರು ’ಹೌದಪ್ಪಾ ಹೌದು’ ಎಂದು ಹೇಳುವುದು ವಾಡಿಕೆ. ಒಬ್ಬ ಕಲಾವಿದನು ಒಂದು ಕಥೆಯನ್ನು ಹೇಳಿ ನಿಲ್ಲಿಸಿದಾಗ, ಮತ್ತೊಬ್ಬ ಕಲಾವಿದನು ಮತ್ತೊಂದು ಕಥೆಯನ್ನು ಮುಂದುವರೆಸಿಕೊಂಡು ಹೋಗುವನು. ಇಂತಹ ಕಥಾ ನಿರೂಪಣೆಯು ಗದ್ಯ ಪದ್ಯ ಮಿಶ್ರಿತದಿಂದ ಕೂಡಿರುತ್ತದೆ. ಮಾದೇಶ್ವರ ಮತ್ತು ಇತರ ದೇವತೆಗಳನ್ನು ಕಥೆಯ ಆರಂಭ ಮತ್ತು ಅಂತ್ಯದಲ್ಲಿ ಸ್ಮರಿಸುವುದು ಕಡ್ಡಾಯವಾಗಿರುತ್ತದೆ.