ಕೆಜಿಎಫ್-2 ಶೂಟಿಂಗ್ ಆರಂಭ; ವೈರಲ್ ಆಯ್ತು ಯಶ್ ಲುಕ್!

 ಸೆಪ್ಟೆಂಬರ್ ವೇಳೆಗೆ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Updated: May 15, 2019 , 05:03 PM IST
ಕೆಜಿಎಫ್-2 ಶೂಟಿಂಗ್ ಆರಂಭ; ವೈರಲ್ ಆಯ್ತು ಯಶ್ ಲುಕ್!

ಬೆಂಗಳೂರು: ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಕೆಜಿಎಫ್-1 ಚಿತ್ರದ ಬೆನ್ನಲೇ ಕೆಜಿಎಫ್-2 ಚಿತ್ರದ ಶೂಟಿಂಗ್ ಆರಂಭವಾಗಿದೆ. 

ಕೆಜಿಎಫ್ 2 ಚಿತ್ರದಲ್ಲಿ ಈ ಹಿಂದಿನ ಚಿತ್ರಕ್ಕಿಂತಲೂ ಅಧಿಕ ಫೈಟಿಂಗ್ ದೃಶ್ಯಗಳಿದ್ದು ಇನ್ನೂ ಭೀಕರವಾದ ಹೋರಾಟ ಸನ್ನಿವೇಶಗಳಿರಲಿವೆ. ಸೆಪ್ಟೆಂಬರ್ ವೇಳೆಗೆ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಕೆಜಿಎಫ್ ನಲ್ಲಿ ರಾಕಿ ಬಾಯ್ ಪಾತ್ರದಲ್ಲಿ ನಟಿಸಿದ್ದ ಯಶ್, ಕೆಜಿಎಫ್2 ಸಿನಿಮಾ ಮೂಲಕ ದೈತ್ಯ ರಾಕ್ಷಸನನ್ನು ತೆರೆದಿಡಲು ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ತಿಂಗಳ ಅಂತ್ಯ ಅಥವಾ ಜೂನ್ ತಿಂಗಳ ಆರಂಭದಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗುವುದಾಗಿ ಯಶ್ ಹೇಳಿದ್ದಾರೆ.

ಕೆಜಿಎಫ್ 1 ಚಿತ್ರಕ್ಕೆ ಹಾಕಿದ್ದ ಬಜೆಟ್ ಗಿಂತ ಬೃಹತ್ ಮೊತ್ತದ ಬಂಡವಾಳವನ್ನು ಕೆಜಿಎಫ್ 2 ಚಿತ್ರಕ್ಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಆ ಚಿತ್ರಕ್ಕಿಂತ ಬೃಹತ್ ಗಾತ್ರದ ಸೆಟ್ ಇರಲಿದ್ದು, ನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರವನ್ನೂ ಸಹ ಐದೂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಮತ್ತೊಂದೆಡೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್ ಹೇಗಿರಲಿದೆ ಎಂಬುದಕ್ಕೆ ಇದೀಗ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಪಕ್ಕಾ ಗೆಟಪ್ ಬಗ್ಗೆ ಚಿತ್ರ ತಂಡವೇ ಹೇಳಬೇಕಿದೆ.