ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಆರೋಗ್ಯಕರ ಆಹಾರ ಪದಾರ್ಥಗಳ ಬೆಲೆಯನ್ನು ಕಡಿತಗೊಳಿಸುವುದರಿಂದ ವರ್ಷಕ್ಕೆ ಸಾವಿರಾರು ಜೀವಗಳನ್ನು ಉಳಿಸಬಹುದು ಎಂದು ಹೊಸ ಅಧ್ಯಯನವು ತಿಳಿಸಿದೆ.
ಇದರೊಂದಿಗೆ ಸಿಹಿಯಾದ ಪಾನೀಯಗಳು, ಕೆಂಪು ಮಾಂಸ ಮತ್ತು ಕುರುಕಲು ತಿಂಡಿಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸುವುದರಿಂದ ಮಧುಮೇಹ ಮತ್ತು ಹೃದಯರಕ್ತನಾಳೀಯ ಕಾಯಿಲೆಗಳಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು, ಸಂಸ್ಕರಿಸಿದ ಮತ್ತು ಸಂಸ್ಕರಿಸದ ಕೆಂಪು ಮಾಂಸಗಳು ಮತ್ತು ಸಿಹಿಯಾದ ಪಾನೀಯಗಳು - ಈ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ತಲಾ ಶೇ.10 ರಷ್ಟು ಕಡಿಮೆಯಾಗಿದ್ದರೆ, ವರ್ಷಕ್ಕೆ ಅಂದಾಜು 23,000 ಸಾವುಗಳು ಸಂಭವಿಸುವುದನ್ನು ತಡೆಯಬಹುದು.
ಅದೇ ಈ ಆಹಾರಪದಾರ್ಥಗಳ ಬೆಲೆಯು ತಲಾ ಶೇ.30 ರಷ್ಟು ಕಡಿಮೆಯಾಗಿದ್ದರೆ ಪ್ರತಿ ವರ್ಷ 63,000 ಸಾವುಗಳನ್ನು ತಡೆಯಬಹುದಿತ್ತು ಅಥವಾ ಕಾರ್ಡಿಯೊಮೆಟೊಬಾಲಿಕ್ ಸಂಬಂಧಿತ ರೋಗಗಳಿಂದ ಸಾಯುವವರ ಸಂಖ್ಯೆಯು ಶೇ.9.2 ರಷ್ಟು ಕಡಿಮೆಯಾಗುತ್ತಿತ್ತು.
"ನಾವು ಸೇವಿಸುವ ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರ ಪದಾರ್ಥಗಳ ಮೇಲೆ ನಿಗದಿಪಡಿಸುವ ಬೆಲೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ನಿರ್ಧರಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳನ್ನು ತಗ್ಗಿಸಿ, ಸಕ್ಕರೆ ಪಾನೀಯಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ಉಂಟಾದ ಬದಲಾವಣೆಗಳನ್ನು ಗುರುತಿಸಲಾಗಿದೆ" ಎಂದು ಅಮೇರಿಕಾದ ಬೋಸ್ಟನ್ನ ಟಫ್ಟ್ಸ್ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಜೋಸ್ ಎಲ್.ಪೆನಲ್ವೋ ತಿಳಿಸಿದ್ದಾರೆ.
ಸಕ್ಕರೆ-ಸಿಹಿಯಾದ ಪಾನೀಯಗಳ ಮೇಲಿನ ಹೆಚ್ಚಿದ ತೆರಿಗೆಗಳು ಮಧುಮೇಹದಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆಗೊಳಿಸಿದರೆ, ಹಣ್ಣುಗಳು ಮತ್ತು ತರಕಾರಿಗಳ ಮೇಲಿನ ಸಬ್ಸಿಡಿಗಳು ಪಾರ್ಶವಾಯುನಿಂದ ಉಂಟಾಗುವ ಸಾವುಗಳನ್ನು ಕಡಿಮೆಗೊಳಿಸಿದೆ ಎಂದು ಬಿಎಂಸಿ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿ ಬಹಿರಂಗಪಡಿಸಿದೆ.