ಆದಿತ್ಯ ಎಲ್1 ಯೋಜನೆ:  ಸೂರ್ಯನ ಉರಿಯಿಂದ ಭೂಮಿಯ ರಕ್ಷಣೆ

Written by - Girish Linganna | Edited by - Manjunath N | Last Updated : Aug 31, 2023, 09:22 PM IST
  • ಸೌರ ಚಕ್ರದ ಸಂದರ್ಭದಲ್ಲಿ, ಸೂರ್ಯನಲ್ಲಿ ನಡೆಯುವ ಬೃಹತ್ ಸ್ಫೋಟಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ
  • ಇದರಲ್ಲಿ ಸೌರ ಜ್ವಾಲೆಗಳು ಮತ್ತು ಕೊರೋನಲ್ ಮಾಸ್ ಇಜೆಕ್ಷನ್‌ಗಳು (ಸಿಎಂಇಗಳು) ಸೇರಿವೆ
  • ಈ ಸ್ಫೋಟಗಳು ಅಪಾರ ಪ್ರಮಾಣದಲ್ಲಿ ಶಕ್ತಿ ಮತ್ತು ವಸ್ತುಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮುತ್ತವೆ
ಆದಿತ್ಯ ಎಲ್1 ಯೋಜನೆ:  ಸೂರ್ಯನ ಉರಿಯಿಂದ ಭೂಮಿಯ ರಕ್ಷಣೆ title=

¶¶ ಸೋಲಾರ್ ಸೈಕಲ್ ಎನ್ನುವುದು ಅಂದಾಜು ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯನ ಕಾಂತೀಯ ಕ್ಷೇತ್ರ ಹೊಂದುವ ಪರಿವರ್ತನೆಯಾಗಿದೆ. ¶¶

ಸೂರ್ಯ ಒಂದು ಬೃಹತ್, ಬಿಸಿಯಾದ ಅನಿಲದ ಉಂಡೆ. ಈ ಅನಿಲ ಸುತ್ತ ಮುತ್ತ ಚಲಿಸುತ್ತಾ, ದೊಡ್ಡ ಕಾಂತೀಯ ಕ್ಷೇತ್ರವನ್ನು ನಿರ್ಮಿಸುತ್ತದೆ. ಈ ಕಾಂತೀಯ ಕ್ಷೇತ್ರ ಸೋಲಾರ್ ಸೈಕಲ್ ಎಂದು ಕರೆಯಲ್ಪಡುವ ಸೌರ ಚಕ್ರವನ್ನು ಹೊಂದುತ್ತದೆ.

ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ, ಸೂರ್ಯನ ಕಾಂತೀಯ ಕ್ಷೇತ್ರ ಬದಲಾಗುತ್ತದೆ. ಇದು ಒಂದು ಅಯಸ್ಕಾಂತ ತಿರುಗಿದ ರೀತಿಯಲ್ಲಿ ನಡೆಯುತ್ತದೆ. ಸೂರ್ಯನ ಕಾಂತೀಯ ಕ್ಷೇತ್ರದ ಉತ್ತರ ಮತ್ತು ದಕ್ಷಿಣ ಧ್ರುವಗಳು ಪರಸ್ಪರ ಸ್ಥಾನ ಬದಲಾವಣೆ ಹೊಂದುತ್ತವೆ. ಅವುಗಳು ಮರಳಿ ಮೊದಲಿನ ಸ್ಥಾನಕ್ಕೆ ತಲುಪಲು ಇನ್ನೂ ಹನ್ನೊಂದು ವರ್ಷ ತಗಲುತ್ತದೆ.

ಈ ಸೌರ ಚಕ್ರ ಸೂರ್ಯನ ಮೇಲ್ಮೈ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯನ ಕಾಂತೀಯ ಕ್ಷೇತ್ರದ ಕಾರಣದಿಂದ ಸನ್ ಸ್ಪಾಟ್‌ಗಳು ರೂಪುಗೊಳ್ಳುತ್ತವೆ. ಈ ಕ್ಷೇತ್ರಗಳು ಬದಲಾವಣೆ ಹೊಂದಿದಂತೆ, ಅದರ ಮೇಲ್ಮೈ ಚಟುವಟಿಕೆಗಳೂ ಬದಲಾಗುತ್ತವೆ.

¶¶ ಪ್ರಸ್ತುತ ಸೌರ ಚಕ್ರ, ಸೋಲಾರ್ ಸೈಕಲ್ 25 ಎನ್ನಲಾಗಿದ್ದು, ಡಿಸೆಂಬರ್ 2020ರಲ್ಲಿ ಆರಂಭಗೊಂಡಿದೆ. ಈ ಚಕ್ರದ ಸೋಲಾರ್ ಮ್ಯಾಕ್ಸಿಮಮ್ 2025ರಲ್ಲಿ ಜರುಗುವ ನಿರೀಕ್ಷೆಗಳಿವೆ. ¶¶

ನಾವು ಸನ್ ಸ್ಪಾಟ್‌ಗಳನ್ನು ಲೆಕ್ಕ ಹಾಕುವ ಮೂಲಕ ಸೌರ ಚಕ್ರವನ್ನು ತಿಳಿಯಬಹುದು. ಅತ್ಯಂತ ಕಡಿಮೆ ಸನ್ ಸ್ಪಾಟ್‌ಗಳಿದ್ದಾಗ, ಸೋಲಾರ್ ಮಿನಿಮಮ್ ಮೂಲಕ ಸೌರ ಚಕ್ರ ಆರಂಭಗೊಳ್ಳುತ್ತದೆ. ಸಮಯ ಕಳೆದಂತೆ, ಸೌರ ಚಟುವಟಿಕೆಗಳು ಹೆಚ್ಚಾಗುತ್ತಾ, ಸನ್ ಸ್ಪಾಟ್‌ಗಳ ಸಂಖ್ಯೆಯೂ ಏರಿಕೆ ಕಾಣುತ್ತದೆ.

ಸೌರ ಚಕ್ರದ ಸಂದರ್ಭದಲ್ಲಿ, ಅದರ ಮಧ್ಯದ ಅವಧಿಯನ್ನು ಸೋಲಾರ್ ಮ್ಯಾಕ್ಸಿಮಮ್ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಸೂರ್ಯನಲ್ಲಿ ಅತಿಹೆಚ್ಚು ಸನ್ ಸ್ಪಾಟ್‌ಗಳಿರುತ್ತವೆ. ಸೌರ ಚಕ್ರ ಕೊನೆಯಾಗುತ್ತಾ ಬಂದಂತೆ, ಅದು ಕ್ರಮೇಣ ಸೋಲಾರ್ ಮಿನಿಮಮ್ ಹಂತಕ್ಕೆ ಮರಳುತ್ತದೆ. ಬಳಿಕ ಆರಂಭದಿಂದ ಹೊಸ ಸೌರ ಚಕ್ರ ಶುರುವಾಗುತ್ತದೆ.

ಸೌರ ಚಕ್ರದ ಸಂದರ್ಭದಲ್ಲಿ, ಸೂರ್ಯನಲ್ಲಿ ನಡೆಯುವ ಬೃಹತ್ ಸ್ಫೋಟಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಇದರಲ್ಲಿ ಸೌರ ಜ್ವಾಲೆಗಳು ಮತ್ತು ಕೊರೋನಲ್ ಮಾಸ್ ಇಜೆಕ್ಷನ್‌ಗಳು (ಸಿಎಂಇಗಳು) ಸೇರಿವೆ. ಈ ಸ್ಫೋಟಗಳು ಅಪಾರ ಪ್ರಮಾಣದಲ್ಲಿ ಶಕ್ತಿ ಮತ್ತು ವಸ್ತುಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮುತ್ತವೆ.

ಇಂತಹ ಸನ್ನಿವೇಶಗಳು ಭೂಮಿಯ ಮೇಲೂ ಪರಿಣಾಮ ಬೀರಬಲ್ಲವು. ಉದಾಹರಣೆಗೆ, ಈ ಪ್ರಕ್ರಿಯೆಗಳು ಆಗಸದಲ್ಲಿ ಅರೋರಾಗಳು ಎಂದು ಕರೆಯಲ್ಪಡುವ ಬೆಳಕನ್ನು ಮೂಡಿಸುತ್ತವೆ. ಅವುಗಳು ರೇಡಿಯೋ ಸಂವಹನಕ್ಕೆ ಅಡ್ಡಿ ಉಂಟುಮಾಡಬಲ್ಲವು. ಕೆಲವು ಸಂದರ್ಭಗಳಲ್ಲಿ, ಅತ್ಯಂತ ದೊಡ್ಡ ಸ್ಫೋಟಗಳು ಭೂಮಿಯ ಮೇಲಿರುವ ವಿದ್ಯುತ್ ಗ್ರಿಡ್‌ಗಳ ಮೇಲೂ ಅಡ್ಡ ಪರಿಣಾಮ ಉಂಟುಮಾಡಬಲ್ಲವು.

ಕೆಲವು ಸೌರ ಚಕ್ರಗಳ ಅವಧಿಯಲ್ಲಿ ಹೆಚ್ಚು ಸನ್ ಸ್ಪಾಟ್‌ಗಳು ಮತ್ತು ತೀವ್ರ ಚಟುವಟಿಕೆಗಳು ಕಂಡುಬಂದರೆ, ಇನ್ನು ಕೆಲವು ಸೌರ ಚಕ್ರಗಳಲ್ಲಿ ಕಡಿಮೆ ಸನ್ ಸ್ಪಾಟ್‌ಗಳು ಮತ್ತು ಕಡಿಮೆ ಚಟುವಟಿಕೆಗಳು ಕಂಡುಬರುತ್ತವೆ. ವಿಜ್ಞಾನಿಗಳು ಸೌರ ಚಕ್ರಗಳ ತೀವ್ರತೆ ಹಾಗೂ ಅವಧಿಯ ಕುರಿತು ನಮ್ಮ ಜ್ಞಾನವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನಗಳು ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ತಿಳಿಯಲು ನೆರವಾಗುತ್ತವೆ.

ಸೌರ ಚಕ್ರದ ಕುರಿತು ಸರಿಯಾದ ಲೆಕ್ಕಾಚಾರ ಹೊಂದುವುದರಿಂದ ವಿಜ್ಞಾನಿಗಳಿಗೆ ಭೂಮಿಯಲ್ಲಿ ನಮ್ಮ ರೇಡಿಯೋ ಸಂವಹನ, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು ಮತ್ತು ಗಗನಯಾತ್ರಿಗಳ ಸುರಕ್ಷತೆ ಖಾತ್ರಿಪಡಿಸಲು ಸಾಧ್ಯವಾಗುತ್ತದೆ.

ಸೌರ ಚಟುವಟಿಕೆಗಳು ಉಪಗ್ರಹಗಳ ಇಲೆಕ್ಟ್ರಾನಿಕ್ಸ್ ಮೇಲೆ ಪರಿಣಾಮ ಬೀರಿ, ಅವುಗಳ ಕಾರ್ಯಾವಧಿಯನ್ನು ಕುಂಠಿತಗೊಳಿಸಬಲ್ಲವು. ಇನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗೆ ಕಾರ್ಯಾಚರಿಸುವ ಗಗನಯಾತ್ರಿಗಳಿಗೆ ವಿಕಿರಣಗಳು ಅಪಾಯ ತಂದೊಡ್ಡಬಲ್ಲವು. ಆದರೆ ವಿಜ್ಞಾನಿಗಳಿಗೆ ಸೌರ ಚಟುವಟಿಕೆಗಳು ಹೆಚ್ಚಾಗುವ ಸಮಯವನ್ನು ತಿಳಿಯಲು ಸಾಧ್ಯವಾದರೆ, ಅಂತಹ ಅವಧಿಯಲ್ಲಿ ಉಪಗ್ರಹಗಳನ್ನು ಸುರಕ್ಷತಾ ಹಂತದಲ್ಲಿಡಬಹುದು. ಗಗನಯಾತ್ರಿಗಳು ಅವರ ಬಾಹ್ಯಾಕಾಶ ನಡಿಗೆಯನ್ನು ಮುಂದೂಡಬಹುದು.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News