ಪುಣೆ: ಮಹಾರಾಷ್ಟ್ರದ ಅಂಬೆಗಾಂವ್ ತಾಲೂಕಿನಲ್ಲಿರುವ ಥೊರಾಂಡೇಲ್ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕ ರವಿಯನ್ನು ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ಡಿಆರ್ಎಫ್ ತಂಡ ರಕ್ಷಿಸಿದೆ. ಸದ್ಯ ಬಾಲಕನನ್ನು ಪುಣೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಆಟವಾಡುತ್ತ ವೇಳೆ 6 ವರ್ಷದ ರವಿ ಎಂಬ ಬಾಲಕ ಬುಧವಾರ ಮಧ್ಯಾಹ್ನ 200 ಅಡಿಗಳ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಆ ಕೊಳವೆ ಬಾವಿಯಲ್ಲಿ 10 ಅಡಿ ಎತ್ತರದಲ್ಲಿ ರವಿ ಸಿಲುಕಿದ್ದ ಎಂದು ವರದಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಎನ್ಡಿಆರ್ಎಫ್ ತಂಡ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿದರು.
ರವಿ ಎಂಬ ಬಾಲಕ ಸಿಲುಕಿದ್ದ ಕೊಳವೆ ಬಾವಿ ಬಹಳ ಚಿಕ್ಕದಾಗಿತ್ತು, ಹಾಗಾಗಿ ರವಿಯನ್ನು ತಲುಪುವುದು ಬಹಳ ಕಷ್ಟಕರವಾಗಿತ್ತು ಎನ್ನಲಾಗಿದ್ದು, ಬೆಳಗ್ಗೆ 3 ಗಂಟೆ ಸುಮಾರಿಗೆ ರವಿ ಇರುವ ಸ್ಥಳ ತಲುಪುವಲ್ಲಿ ಎನ್ಡಿಆರ್ಎಫ್ನ 25 ಜನರ ತಂಡ ಯಶಸ್ವಿಯಾಗಿದೆ. ಈ ವೇಳೆ ವೈದ್ಯರ ತಂಡ ನಿರಂತರವಾಗಿ NDRF ತಂಡದೊಂದಿಗೆ ರವಿ ಸುರಕ್ಷತೆ ಬಗ್ಗೆ ನಿಗಾ ವಹಿಸಿತ್ತು.
ಬುಧವಾರ, ಪುಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನವಲ್ ಕಿಶೋರ್ ರಾಮ್, ಮಗು ಕೇವಲ 10 ಅಡಿ ಎತ್ತರದಲ್ಲಿದೆ. ಪಾರುಗಾಣಿಕಾ ಕೆಲಸ ಪ್ರಗತಿಯಲ್ಲಿದೆ. ಮಗುವಿಗೆ ಪೈಫ್ ಮೂಲಕ ಆಮ್ಲಜನಕ ಒದಗಿಸಲಾಗುತ್ತಿದೆ. ಮಗುವನ್ನು ಉಳಿಸಲು ತಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.