ಗುಜರಾತ್: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಅಲ್ಪೇಶ್ ಠಾಕೂರ್ ಬಿಜೆಪಿ ಸೇರುವ ಬಗ್ಗೆ ಹೇಳಿದ್ದೇನು?

2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪೇಶ್ ಠಾಕೂರ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

Last Updated : Apr 11, 2019, 08:31 AM IST
ಗುಜರಾತ್: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಅಲ್ಪೇಶ್ ಠಾಕೂರ್ ಬಿಜೆಪಿ ಸೇರುವ ಬಗ್ಗೆ ಹೇಳಿದ್ದೇನು? title=

ಅಹಮದಾಬಾದ್: ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್‌ಗೆ ಶಾಕ್ ನೀಡಿದ ಗುಜರಾತ್ ನ ಒಬಿಸಿ ನಾಯಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರು. 2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪೇಶ್ ಠಾಕೂರ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಚಾವ್ಡಾಗೆ ತಮ್ಮ ರಾಜೀನಾಮೆ ಸಲ್ಲಿಸಿದ ಠಾಕೂರ್ ಅವಮಾನ ಮತ್ತು ಮೋಸದ ಕಾರಣ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. 'ನನಗೆ ಅವಮಾನ ಮಾಡುತ್ತಿರುವ, ನನ್ನನ್ನು ಕಡೆಗಣಿಸುತ್ತಿರುವ ಮತ್ತು ನನಗೆ ಮೋಸ ಮಾಡುತ್ತಿರುವಂತಹ ಪಕ್ಷದಲ್ಲಿ ನನಗೆ ಬದುಕಲು ಸಾಧ್ಯವಿಲ್ಲ' ಎಂದು ಅವರು ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. 

ನನ್ನ ಸಮುದಾಯದ ಯುವಜನರು ಕುಪಿತಗೊಂಡಿದ್ದಾರೆ. ನನ್ನ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ, ಅವರು ಅವಮಾನಕ್ಕೊಳಗಾಗುತ್ತಿದ್ದರೆ, ಅವರಿಗೆ ಮೊಸವಾಗುತ್ತಿದ್ದರೆ, ನನಗೆ ಅದನ್ನು ಸಹಿಸಲು ಸಾಧ್ಯವಿಲ್ಲ. ನನಗೆ ಠಾಕೂರ್ ಸೇನೆ ಸರ್ವೋತ್ಕೃಷ್ಟವಾಗಿದೆ ಹಾಗಾಗಿ ನಾನು ಪಕ್ಷವನ್ನು ಬಿಡುತ್ತಿದ್ದೇನೆ ಎಂದು ಠಾಕೂರ್ ಪತ್ರದಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪೇಶ್ ಠಾಕೂರ್, 2017ರ ವಿಧಾನಸಭಾ ಚುನಾವಣೆಯಲ್ಲಿ ಠಾಕೂರ್ ಸೇನೆಯ ಸಹಾಯದಿಂದ ಕಾಂಗ್ರೆಸ್ ಸುಮಾರು 43 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ, ಚುನಾವಣೆ ಬಳಿಕ ನಮ್ಮ ಯುವ ಜನರನ್ನು ಪಕ್ಕಕ್ಕೆ ಸರಿಸಲಾಗಿದೆ. ಅವರನ್ನು ಅವಮಾನಿಸಲಾಗುತ್ತಿದೆ. ಪಕ್ಷದ ಪ್ರಮುಖರಲ್ಲಿ ನಮ್ಮ ಯುವ ಸಮುದಾಯಕ್ಕೆ ಸೂಕ್ತ ಸ್ಥಾನ ನೀಡುವಂತೆ ಪದೇ-ಪದೇ ಬೇಡಿಕೆ ಇಟ್ಟಿದ್ದೇನೆ. ಯಾವುದಕ್ಕೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಈ ವೇಳೆ ಅವರು ಮುಂದೆ ಬಿಜೆಪಿ ಸೇರಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ಬಿಜೆಪಿಗೆ ಸೇರಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Trending News