ಅಮರಾವತಿ: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷ(ಟಿಡಿಪಿ) ಧೂಳಿಪಟವಾಗಿದ್ದು, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಗದ್ದುಗೆ ಏರಲು ಸಿದ್ಧವಾಗಿದೆ.
175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 88 ಸ್ಥಾನಗಳ ಅಗತ್ಯವಿದೆ. ಈ ಬಾರಿಯ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹೀನಾಯ ಸೋಲುಂಡಿದ್ದು, ವೈಎಸ್ ಆರ್ ಕಾಂಗ್ರೆಸ್ ಬರೋಬ್ಬರಿ 148 ಸ್ಥಾನಗಳನ್ನು ಪಡೆದಿದ್ದು ಜಗನ್ ಗೆ ಮುಖ್ಯಮಂತ್ರಿ ಪಟ್ಟ ಖಚಿತವಾಗಿದೆ.
ಚಂದ್ರಬಾಬು ನಾಯ್ಡು ಸಂಜೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ. ಮೇ 30ರಂದು ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಂಧ್ರ ಪ್ರದೇಶದಲ್ಲಿ 2019ರ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆಸಲಾಗಿತ್ತು. ಆಂಧ್ರ ಪ್ರದೇಶದ 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ 2019ರ ಎಪ್ರಿಲ್ 11ರಂದು ಒಂದೇ ಹಂತದಲ್ಲಿ ಚುನಾವಣಾ ನಡೆದಿತ್ತು.