Republic Day 2023: ಗಣರಾಜ್ಯೋತ್ಸವ ಸಂಭ್ರಮಕ್ಕೆ ಅರ್ಜೆಂಟೀನಾ ವಾಯುಪಡೆ-ಭೂಸೇನಾ ಯೋಧರ ಆಗಮನ: ಮತ್ತಷ್ಟು ಹೆಚ್ಚಲಿದೆ ಮೆರುಗು

Argentine Air Force-Army soldiers participate in Republic Day: 12 ಜನರ ಈ ಯುವ ಯೋಧರ ನಿಯೋಗ 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭವನ್ನು ಆಚರಿಸುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರತಿವರ್ಷವೂ, ಗಣರಾಜ್ಯೋತ್ಸವ ಸಮಾರಂಭವನ್ನು ಅಮೋಘವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ.

Written by - Girish Linganna | Last Updated : Jan 21, 2023, 09:42 PM IST
    • ಅರ್ಜೆಂಟೀನಾ ಭೂಸೇನೆ ಮತ್ತು ವಾಯುಪಡೆಯ ಯುವ ಸೈನಿಕರು ಭಾರತಕ್ಕೆ ಆಗಮನ
    • ಜನವರಿ 26ರಂದು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿ
    • 12 ಜನರ ಈ ಯುವ ಯೋಧರ ನಿಯೋಗ ಆಗಮನ
Republic Day 2023: ಗಣರಾಜ್ಯೋತ್ಸವ ಸಂಭ್ರಮಕ್ಕೆ ಅರ್ಜೆಂಟೀನಾ ವಾಯುಪಡೆ-ಭೂಸೇನಾ ಯೋಧರ ಆಗಮನ: ಮತ್ತಷ್ಟು ಹೆಚ್ಚಲಿದೆ ಮೆರುಗು title=
Republic Day 2023

Argentine Air Force-Army soldiers participate in Republic Day: ಅರ್ಜೆಂಟೀನಾದ ರಕ್ಷಣಾ ಸಚಿವಾಲಯ ಕೈಗೊಂಡಿರುವ ಯಂಗ್ ಎಕ್ಸ್‌ಚೇಂಜ್ ಆ್ಯಂಡ್ ಪಾರ್ಟಿಸಿಪೇಶನ್ (ವೈಇಪಿ) ಯೋಜನೆಯಡಿಯಲ್ಲಿ, ಅರ್ಜೆಂಟೀನಾ ಭೂಸೇನೆ ಮತ್ತು ವಾಯುಪಡೆಯ ಯುವ ಸೈನಿಕರು ಭಾರತಕ್ಕೆ ಆಗಮಿಸಿ, 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜನವರಿ 12ರಂದು ಅರ್ಜೆಂಟೀನಾದ ಭಾರತೀಯ ರಾಯಭಾರಿ ದಿನೇಶ್ ಭಾಟಿಯಾ ಅವರು ಅರ್ಜೆಂಟೀನಾ ಯೋಧರ ನಿಯೋಗವನ್ನು ವಾಯುಪಡೆಯ ಮುಖ್ಯಸ್ಥರಾದ ಬ್ರಿಗೇಡಿಯರ್ ಜನರಲ್ ಕ್ಸೇವಿಯರ್ ಐಸಾಕ್ ಅವರ ಉಪಸ್ಥಿತಿಯಲ್ಲಿ ಅರ್ಜೆಂಟೀನಾದಿಂದ ಬೀಳ್ಕೊಟ್ಟರು.

ಇದನ್ನೂ ಓದಿ: ದೆಹಲಿಯಲ್ಲಿ ನಡೆಯುವ 74ನೇ ಗಣರಾಜ್ಯೋತ್ಸವ ಪರೇಡ್‌ ನೋಡಬೇಕೆ : ಈ ರೀತಿ ಟಿಕೆಟ್‌ ಬುಕ್‌ ಮಾಡಿ..!

12 ಜನರ ಈ ಯುವ ಯೋಧರ ನಿಯೋಗ 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭವನ್ನು ಆಚರಿಸುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರತಿವರ್ಷವೂ, ಗಣರಾಜ್ಯೋತ್ಸವ ಸಮಾರಂಭವನ್ನು ಅಮೋಘವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ನವದೆಹಲಿಯ ಕರ್ತವ್ಯ ಪಥದಲ್ಲಿ ಭಾರತೀಯ ಸೇನಾಪಡೆಗಳ ಯೋಧರು ಪಥ ಸಂಚಲನ ನಡೆಸುತ್ತಾರೆ. ಅದರೊಡನೆ ಭಾರತದ ಮಿಲಿಟರಿ ಸಾಮರ್ಥ್ಯದ ಪ್ರದರ್ಶನವೂ ನಡೆಯುತ್ತದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುವ ಸಮಾರಂಭಕ್ಕೆ ಪಥಸಂಚಲನದ ಮೂಲಕ ಆರಂಭ ನೀಡಲಾಗುತ್ತದೆ. ಈ ಪಥಸಂಚಲನ ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಹಿಲ್‌ನಿಂದ ಆರಂಭವಾಗಿ, ಕರ್ತವ್ಯ ಪಥದ ಮೂಲಕ ಸಾಗಿ, ಇಂಡಿಯಾ ಗೇಟ್ ಮೂಲಕ ತೆರಳಿ, ಕೆಂಪು ಕೋಟೆ ತಲುಪುತ್ತದೆ. ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಗೌರವ ಸೂಚಿಸಲು, ಭಾರತದ ವಿವಿಧತೆಯಲ್ಲಿನ ಏಕತೆಯನ್ನು ಸ್ಮರಿಸಲು, ಮತ್ತು ಭಾರತದ ರಾಜ್ಯಗಳ ಸಾಂಸ್ಕೃತಿಕ ಇತಿಹಾಸವನ್ನು ನೆನೆಯಲು ಕರ್ತವ್ಯ ಪಥದಲ್ಲಿ ಪಥ ಸಂಚಲನ ಆಯೋಜಿಸಲಾಗುತ್ತದೆ. ಬಹುತೇಕ ಎಲ್ಲ ರಾಜ್ಯಗಳಿಂದಲೂ ವಿವಿಧ ಸ್ತಬ್ಧಚಿತ್ರಗಳು ಭಾಗವಹಿಸುತ್ತವೆ.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅರ್ಜೆಂಟೀನಾದ ನಿಯೋಗ ಭಾರತಕ್ಕೆ ಆಗಮಿಸುತ್ತಿದೆ.

ಜುಲೈ 2022ರಲ್ಲಿ, ಭಾರತ ಆರು ಖಂಡಗಳ 25 ಯುವ ನಿಯೋಗಗಳಿಗೆ ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ 2023ರಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ಆಮಂತ್ರಣ ಕಳುಹಿಸಿತು‌. ಈ ಆಮಂತ್ರಣವನ್ನು ಭಾರತೀಯ ಸೇನಾಪಡೆಗಳ ಯುವ ವಿಭಾಗವಾದ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಮೂಲಕ ನೀಡಲಾಗಿದ್ದು, ಯುವಕ ಯುವತಿಯರು ಜನವರಿ 15ರಿಂದ ಜನವರಿ 29, 2023ರ ತನಕ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಇದೇ ಮೊದಲ ಬಾರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಫ್ರಾನ್ಸ್, ಜಪಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಒಮನ್, ಅರ್ಜೆಂಟೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಮಾರಿಷಸ್, ಮೊಜಾಂಬಿಕ್, ನೈಜೀರಿಯಾ, ಸೀಶೆಲ್ಸ್ ಸೇರಿದಂತೆ 15 ರಾಷ್ಟ್ರಗಳ ಯುವ ನಿಯೋಗಗಳಿಗೆ ಆಮಂತ್ರಣ ನೀಡಲಾಗಿದೆ.

ಈಗಾಗಲೇ ಎನ್‌ಸಿಸಿ ಬಾಂಗ್ಲಾದೇಶ, ಭೂತಾನ್, ನೇಪಾಳ, ರಷ್ಯಾ, ಕಜಕಿಸ್ತಾನ, ಸಿಂಗಾಪುರ, ಕಿರ್ಗಿಜ಼್ ರಿಪಬ್ಲಿಕ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ವಿಯೆಟ್ನಾಮ್ ಗಳಡನೆ ಯೂತ್ ಎಕ್ಸ್‌ಚೇಂಜ್ ಪ್ರೋಗ್ರಾಮ್ ಜಾರಿಗೆ ತಂದಿದ್ದು, ಆ ಪಟ್ಟಿಗೆ ಈ 15 ರಾಷ್ಟ್ರಗಳೂ ಸೇರ್ಪಡೆಗೊಳ್ಳಲಿವೆ.

ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಮತ್ತು 25 ರಾಷ್ಟ್ರಗಳಿಂದ ಆಗಮಿಸುವ ಯುವ ಸಂಘಟನೆಗಳ ಅಂದಾಜು 300 ಸದಸ್ಯರನ್ನು ವಿವಿಧ ಸಮಾರಂಭಗಳಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ. ಈ ಪ್ರವಾಸದ ಅಂಗವಾಗಿ, ಎಲ್ಲ ಇಪ್ಪತ್ತೈದು ರಾಷ್ಟ್ರಗಳಿಂದಲೂ ತಲಾ ಹತ್ತು ಯುವಕರು ಮತ್ತು ಅವರ ಓರ್ವ ಮೇಲ್ವಿಚಾರಕರನ್ನು ಪ್ರಮುಖ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲಾಗಿದೆ. ಈ ರೀತಿ ಆಮಂತ್ರಿತರಾಗಿರುವ ಯುವಕರು ಎನ್‌ಸಿಸಿ ಗಣರಾಜ್ಯೋತ್ಸವ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಭಾಗವಹಿಸುವ ಯುವಕರ ಆಯ್ಕೆ ಪ್ರಕ್ರಿಯೆಯನ್ನು ಆಯಾ ದೇಶಗಳಲ್ಲಿ ವಿದೇಶಾಂಗ ಸಚಿವಾಲಯ, ಈ ರಾಷ್ಟ್ರಗಳಲ್ಲಿರುವ ಭಾರತೀಯ ದೂತವಾಸ ಕಚೇರಿಯಲ್ಲಿನ ರಕ್ಷಣಾ ಅಂಗಗಳು ಮತ್ತು ಪ್ರತಿ ರಾಷ್ಟ್ರದ ಯುವ ಸಂಘಟನೆಗಳ ಸಹಾಯದಿಂದ ನಡೆಸಲಾಯಿತು.ಇದರೊಡನೆ, ಪರಸ್ಪರ ಸಹಯೋಗಿಗಳಾಗಿ ಕಾರ್ಯ ನಿರ್ವಹಿಸುವ ಯುವ ಸಂಘಟನೆಗಳನ್ನೂ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಪೆರೇಡ್ ನ ಟಿಕೆಟ್ ಗಳು ಆನ್ಲೈನ್ ನಲ್ಲಿ ಲಭ್ಯ

ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಗಳಿಸಿದ ಕಳೆದ 75 ವರ್ಷಗಳಲ್ಲಿ ಭಾರತದ ಮಹತ್ವದ ಸಾಧನೆಗಳು, ಭಾರತದ ಸಂಸ್ಕೃತಿ, ಭಾರತೀಯರ ಕುರಿತಾದ ಅಭ್ಯರ್ಥಿಗಳ ಜ್ಞಾನವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News