ಇಂದು ಅಸಾರಾಂ ಅತ್ಯಾಚಾರ ಪ್ರಕರಣದ ಅಂತಿಮ ತೀರ್ಪು; ಭಾರೀ ಪೋಲಿಸ್ ಭದ್ರತೆ

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಲಿದೆ. 

Last Updated : Apr 25, 2018, 10:22 AM IST
ಇಂದು ಅಸಾರಾಂ ಅತ್ಯಾಚಾರ ಪ್ರಕರಣದ ಅಂತಿಮ ತೀರ್ಪು; ಭಾರೀ ಪೋಲಿಸ್ ಭದ್ರತೆ  title=

ಜೋಧ್ಪುರ : ಆಶ್ರಮದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಲಿದೆ. 

ಅಂತಿಮ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೆ, ಪಂಚಕುಲದಲ್ಲಿ ಕೋಮು ಗಲಭೆ ಉಂಟಾಗುವ ಸಂಭವ ಇರುವುದರಿಂದ ಜೋಧ್ಪುರ ಸೆಂಟ್ರಲ್ ಜೈಲಿನಲ್ಲಿಯೇ ಎಸ್ಸಿ, ಎಸ್ಟಿ ವಿಶೇಷ ಕೋರ್ಟ್ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ. ಇನ್ನು ತೀರ್ಪು ಪ್ರಕಟವಾಗಲಿರುವ ಜೋಧ್ಪುರ ಕೇಂದ್ರ ಕಾರಾಗೃಹ ಪ್ರವೇಶಕ್ಕೆ ಅನುಮತಿ ಕೋರಿ ಮಾಧ್ಯಮದವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಒಂದು ವೇಳೆ, ಈ ಪ್ರಕರಣದಲ್ಲಿ 77 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಅಪರಾಧಿ ಎಂದು ಸಾಬೀತಾದರೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 

2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‌ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‌ನಲ್ಲಿ ಅಸಾರಾಂ ಅವರನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. ಸೆಪ್ಟೆಂಬರ್ 2ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಅಸಾರಾಂ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯ, ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಒಟ್ಟು 12 ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಈ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. 

ನಂತರ ಅದೇ ವರ್ಷ ನವೆಂಬರ್ ತಿಂಗಳಿನಲ್ಲಿ, ಅಸಾರಾಂ ಮತ್ತು ಇತರ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 342, 376, 506 ಮತ್ತು 509, ಮತ್ತು ಮಕ್ಕಳ ರಕ್ಷಣೆಗಾಗಿ ಲೈಂಗಿಕ ಅಪರಾಧಗಳ ಕಾಯ್ದೆ(POCSO)ಯ ಸೆಕ್ಷನ್ 8ರ ಅಡಿಯಲ್ಲಿ ಆರೋಪಿಗಳನ್ನಾಗಿ ದಾಖಲಿಸಿದ್ದರು. ನಂತರ ಅಸಾರಾಂ ವಿರುದ್ಧ ಪ್ರಕರಣಗಳ ಕುರಿತ ಅಂತಿಮ ವಿಚಾರಣೆಯನ್ನು ಏಪ್ರಿಲ್ 7, 2018ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ಏಪ್ರಿಲ್ 25ಕ್ಕೆ ಆದೇಶ ಕಾಯ್ದಿರಿಸಿತ್ತು.

Trending News