ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೋಲಿಸರ ಮೇಲೆ ನಮಗೆ ನಂಬಿಕೆಯಿಲ್ಲ. ಲೋಕಸಭೆ ಚುನಾವಣೆ ಮೇಲ್ವಿಚಾರಣೆಗೆ ಕೇಂದ್ರ ಭದ್ರತಾ ಪಡೆಯನ್ನು ನಿಯೋಜಿಸುವಂತೆ ಇಂದು ಸಂಜೆ 5 ಗಂಟೆಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಸಲ್ಲಿಸಲಿದೆ.
"ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಮತದಾರರಿಗೆ ಬೆದರಿಕೆ ಹಾಕುತ್ತಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ" ಎಂದು ಬಿಜೆಪಿ ಸೋಮವಾರ ಸಹ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
"ಭಾನುವಾರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ದಿನಾಕ ಪ್ರಕಟಗೊಳಿಸಿದ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ಕೇವಲ ಎರಡು ದಿನಗಳು ಮಾತ್ರ ಸಿಆರ್ಪಿಎಫ್ ಪಡೆ ಮೇಲ್ವಿಚಾರಣೆ ನಡೆಸಲಿದೆ. ಉಳಿದ ದಿನಗಳಲ್ಲಿ ಜನರು ರಾಜ್ಯ ಪೋಲಿಸ್ ಪಡೆಯನ್ನೇ ಅವಲಂಬಿಸಬೇಕು ಎಂದು ತೃಣಮೂಲ ಸಚಿವರೊಬ್ಬರು ಹೇಳಿದ್ದಾರೆ. ಈ ಮೂಲಕ ಜನರಿಗೆ ಬೆದರಿಕೆ ಹಾಕಿದ್ದಾರೆ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಜೈ ಪ್ರಕಾಶ್ ಮಜುಂದಾರ್ ಅವರು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯೊಬ್ಬರು ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆಯೂ ಸಹ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಚಟುವಟಿಕೆಗಳನ್ನು ನಡೆಸದಂತೆ ಬಿಜೆಪಿಗೆ ತಡೆಯೊಡ್ದುತ್ತಿದೆ ಎಂದು ಸರ್ಕಾರದ ವಿರುದ್ಧ ದೂರು ನೀಡಲು ಚುನಾವಣಾ ಆಯೋಗವನ್ನು ಬಿಜೆಪಿ ಭೇಟಿ ಮಾಡಿತ್ತು. ಅಲ್ಲದೆ, ರಾಜ್ಯ ಸರ್ಕಾರದ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ನ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ನ್ಯಾಯೋಚಿತ ರೀತಿಯಲ್ಲಿ ಚುನಾವಣೆ ನಡೆಯಲು ಕೇಂದ್ರೀಯ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಒತ್ತಾಯಿಸಿತ್ತು.