ಪುಣೆ: ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ತಮ್ಮ ಸೋಲನ್ನು ಒಪ್ಪಿಕೊಂಡಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಇಲ್ಲಿನ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಎನ್‌ಸಿಪಿ ಈಗಾಗಲೇ ತಮ್ಮ ಸೋಲನ್ನು ಒಪ್ಪಿಕೊಂಡಿವೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿರುವ ಜನರಿಂದಲೇ ಪ್ರಣಾಳಿಕೆ ಸಿದ್ಧವಾಗಿದೆ. ಆದ್ದರಿಂದ ಅವರು ಎಷ್ಟು ಸಾಧ್ಯವೋ ಅಷ್ಟು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.
ಕಾಂಗ್ರೆಸ್-ಎನ್‌ಸಿಪಿ ಈಗಾಗಲೇ ಸಾಕಷ್ಟು ಭರವಸೆಗಳನ್ನು ನೀಡಿದ್ದು, ಅವುಗಳಲ್ಲಿ ಅವರು ಗೆದ್ದ ನಂತರ ಮಹಾರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೂ ತಾಜ್ ಮಹಲ್ ನೀಡುವುದಾಗಿ ಭರವಸೆ ನೀಡುವುದು ಮಾತ್ರ ಉಳಿದಿದೆ ಎಂದು ವ್ಯಂಗ್ಯ ಮಾಡಿದ ಫಡ್ನವಿಸ್, ಮುಂದಿನ 15-20 ವರ್ಷಗಳ ಕಾಲ ಅವರು ಪ್ರತಿಪಕ್ಷಗಳ ಸ್ಥಾನದಲ್ಲಿಯೇ ಕುಳಿತುಕೊಳ್ಳಬೇಕು ಎಂಬುದೂ ಅವರಿಗೆ ತಿಳಿದಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 21 ರಂದು ನಡೆಯಲಿದ್ದು, ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ.