21 ದಿನಗಳ ಲಾಕ್‌ಡೌನ್‌: ಕೇಂದ್ರ ಸರ್ಕಾರದಿಂದ 1 ಲಕ್ಷ 70 ಸಾವಿರ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಣೆ

ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದ್ದು ಜನ್ ಧನ್ ಖಾತೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲಾಗುವುದು. 

Yashaswini V Yashaswini V | Updated: Mar 26, 2020 , 02:31 PM IST
21 ದಿನಗಳ ಲಾಕ್‌ಡೌನ್‌: ಕೇಂದ್ರ ಸರ್ಕಾರದಿಂದ 1 ಲಕ್ಷ 70 ಸಾವಿರ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಣೆ

ನವದೆಹಲಿ: ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ‌ ದೃಷ್ಟಿಯಿಂದ  ದೇಶಾದ್ಯಂತ  ಲಾಕ್‌ಡೌನ್(LOCKDOWN) ಮಾಡಲು ನಿರ್ಧರಿಸಿರುವುದರಿಂದ ಜನರಿಗೆ ತೀವ್ರ ರೀತಿಯ ತೊಂದರೆಯಾಗಿದೆ. ಇದಕ್ಕೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಿದೆ.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೇಂದ್ರ ಸರ್ಕಾರದ ಈ ಮಹತ್ವದ ‌ನಿರ್ಧಾರವನ್ನು ಪ್ರಕಟಿಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ 1.70 ಲಕ್ಷ ರೂಪಾಯಿಗಳ ನಿಧಿ ಘೋಷಣೆ ಮಾಡಲಾಗಿದ್ದು ಈ ಪ್ಯಾಕೇಜ್ ಮೂಲಕ ಲಾಕ್ ಡೌನ್ ‌ನಿಂದ ತೊಂದರೆಗೆ ಒಳಗಾಗುವ ವಲಸೆ ಕಾರ್ಮಿಕರು ಮತ್ತು ಬಡವರಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದ್ದು ಜನ್ ಧನ್ ಖಾತೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲಾಗುವುದು. ಕಿಸಾನ್ ಸಮ್ಮಾನ್ ಮೂಲಕ 8.68 ಕೋಟಿ ರೈತರಿಗೆ ಮೊದಲ ಕಂತಿನ 2 ಸಾವಿರ ರೂಪಾಯಿ ಸೇರಿದಂತೆ ಒಟ್ಟಾರೆ 6 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗುವುದು. ಇದು ಮೂರು ತಿಂಗಳ ಕಾಲ ಅನ್ವಯವಾಗಲಿದೆ ಎಂದು ತಿಳಿಸಿದರು.

ಕರೋನವೈರಸ್ (Coronavirus)  ಸೋಂಕು ಹರಡುವಿಕೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಸೇರಿದಂತೆ ತುರ್ತು ಸೇವೆಯಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ತೊಡಗಿರುವವರಿಗೆ 50 ಲಕ್ಷ ರೂಪಾಯಿ ವಿಮೆ ನೀಡಲಾಗುವುದು. ಇದರಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ 20 ಲಕ್ಷ ರೂಪಾಯಿ ವಿಮೆ ಸವಲತ್ತು ಇರಲಿದೆ. ವಿಮಾನನಿಲ್ದಾಣ ಮತ್ತು ಪೌರಕಾರ್ಮಿಕರಿಗೂ ವಿಮೆ ಸಿಗಲಿದೆ ಎಂದು ತಿಳಿಸಿದರು.

ಲಾಕ್ ಡೌನ್ ಕಾರಣಕ್ಕೆ ಅಗತ್ಯ ವಸ್ತುಗಳು ಸಿಗದೆ ಜನ ತೀವ್ರ ಸಂಕಷ್ಟಕ್ಕೆ ಈಡಾಗಲಿದ್ದಾರೆ. ಆದುದರಿಂದ ಮುಂದಿನ 3 ತಿಂಗಳು ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವ್ಯವಸ್ಥೆ ಒದಗಿಸಲಾಗುವುದು. 5 kg ಅಕ್ಕಿ ಅಥವಾ 5kg ಗೋಧಿ ಹಾಗೂ ಹೆಚ್ಚುವರಿಯಾಗಿ ಒಂದು ಕೆಜಿ ಬೇಳೆ ವಿತರಿಸಲಾಗುವುದು.

ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಬಿಪಿಎಲ್ ಕುಟುಂಬಗಳಿಗೆ ಮೂರು ತಿಂಗಳು ಉಚಿತವಾಗಿ ಸಿಲಿಂಡರ್ ವಿತರಿಸಲಾಗುವುದು. ಇದರಿಂದ 8.3 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.