ನವದೆಹಲಿ: ಮಾರುತಿ ಉದ್ಯೋಗ್ ಲಿಮಿಟೆಡ್ ಕಂಪನಿಯ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಜಗದೀಶ್ ಖಟ್ಟರ್ ಅವರ ವಿರುದ್ಧ CBI ಪ್ರಕರಣ ದಾಖಲಿಸಿದೆ. ಖಟ್ಟರ್ ಸೇರಿದಂತೆ ಇತರೆ ಹಲವು ಜನರ ಮೇಲೆ ಬ್ರೀಚ್ ಆಫ್ ಟ್ರಸ್ಟ್, ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಎಸಗಿದ ಆರೋಪದ ಮೇಲೆ FIR ದಾಖಲಿಸಲಾಗಿದೆ. ಇವರೆಲ್ಲರ ವಿರುದ್ಧ ದೆಹಲಿಯ ಟಾಲ್ ಸ್ಟಾಯ್ ಮಾರ್ಗದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಆಗಿರುವ ಎನ್. ಭಾರದ್ವಾಜ್ CBIಗೆ ದೂರು ನೀಡಿದ್ದರು.
CBI ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಜಗದೀಶ್ ಖಟ್ಟರ್ ಹಾಗೂ ಅವರ ಕಾರ್ನೆಶನ್ ಆಟೋ ಇಂಡಿಯಾ ಸುಮಾರು 110 ಕೋಟಿ ರೂ. ವಂಚನೆ ಎಸಗಿದ್ದಾರೆ. ಬ್ಯಾಂಕ್ ನ ಫಾರೆನ್ಸಿಕ್ ಆಡಿಟ್ ನಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ. ಬಳಿಕ ಇದರ ವಿರುದ್ಧ CBIಗೆ ದೂರು ನೀಡಲಾಗಿದೆ.
ತನ್ನ ಬಳಿಗೆ ಬಂದ ದೂರನ್ನು ಆಧರಿಸಿ ತನಿಖಾ ಸಂಸ್ಥೆ FIR ದಾಖಲಿಸಿಕೊಂಡಿದ್ದು, ಮಂಗಳವಾರ ಜಗದೀಶ್ ಖಟ್ಟರ್ ಅವರ ಠಿಕಾಣಿಗಳ ಮೇಲೆ ದಾಳಿ ನಡೆಸಿದೆ. ಶೀಘ್ರದಲ್ಲಿಯೇ ಈ ಪ್ರಕರಣದಲ್ಲಿ ಹಲವು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತನಿಖಾ ಸಂಸ್ಥೆಯ ಮೂಲಗಳಿಂದ ತಿಳಿದು ಬಂದಿದೆ.