ಹೈದರಾಬಾದ್: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ್ -2 ಚಂದ್ರ ಮಿಷನ್ ಅನ್ನು ಉಡಾವಣೆ ಮಾಡಿರುವ ಬೆನ್ನಲ್ಲೇ ನಗರದ ಫ್ಯೂಚರ್ ಫೌಂಡೇಶನ್ ಸೊಸೈಟಿ ವತಿಯಿಂದ ರಾಕೆಟ್ ಸಹಿತ ವಿಶೇಷ ಗಣೇಶ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಬರೋಬ್ಬರಿ 23.5 ಅಡಿ ಎತ್ತರದ ಉಪಗ್ರಹದ ಮಾದರಿಯಲ್ಲಿ5 ಅಡಿ ಎತ್ತರದ ಗಣೇಶನ ವಿಗ್ರಹವನ್ನು ಇಡಲಾಗಿದ್ದು, ಸಂಪೂರ್ಣ ಕಬ್ಬಿಣದಿಂದ ಮಾಡಲಾಗಿದೆ. ನೀರು ತಾಗಿಸದಂತೆ ಈ ಮಾದರಿಯನ್ನು ಹಲವು ವರ್ಷಗಳ ಕಾಲ ಸಂರಕ್ಷಿಸಿ ಮರುಬಳಕೆ ಮಾಡಬಹುದು. ಈ ಮಾದರಿಯು ಸುಮಾರು 650 ಕೆಜಿ ಭಾರವಿದೆ ಎಂದು ಹೇಳಿರುವ ಫ್ಯೂಚರ್ ಫೌಂಡೇಶನ್ ಸೊಸೈಟಿಯ ಸದಸ್ಯೆ ದೀಪಾ, ಚಂದ್ರಯಾನ್ -2 ಅನ್ನು ಯಶಸ್ವಿಗೊಳಿಸಲು ನಿಜವಾದ ಪ್ರಯತ್ನ ಮಾಡಿದ ತಂಡ ಇಸ್ರೋ ಮತ್ತು ಮಹಿಳಾ ಸಿಬ್ಬಂದಿಯನ್ನು ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.
"ಕಳೆದ 10 ವರ್ಷಗಳಿಂದ ನಾವು ವಿಭಿನ್ನ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ಈ ವರ್ಷ ನಾವು ಚಂದ್ರಯಾನ್-2 ಕಲ್ಪನೆಯೊಂದಿಗೆ ಗಣೇಶನ ಮಾದರಿಯನ್ನು ಸಿದ್ಧಪಡಿಸಿದ್ದೇವೆ. ಈ ಚಂದ್ರಯಾನ್-2 ಮಿಷನ್ ಭಾರತ ಸರ್ಕಾರದ ದೊಡ್ಡ ಸಾಧನೆಯಾಗಿದೆ" ಎಂದು ಫ್ಯೂಚರ್ ಫೌಂಡೇಶನ್ ಸೊಸೈಟಿಯ ಸದಸ್ಯ ಶ್ರೀನಿವಾಸ್ ಎಎನ್‌ಐಗೆ ತಿಳಿಸಿದ್ದಾರೆ.
ಇದೆ ವೇಳೆ, ಇಂದು ಸಂಜೆ ಇಂದು ಚಂದ್ರನ ಮೇಲೆ ಇಳಿಯಲಿರುವ ಬಾಹ್ಯಾಕಾಶ ನೌಕೆಯ ನೇರ ಪ್ರಸಾರವನ್ನೂ ಸಹ ನಾವು ಯೋಜಿಸುತ್ತಿದ್ದೇವೆ" ಎಂದು ಶ್ರೀನಿವಾಸ್ ತಿಳಿಸಿದ್ದಾರೆ.