ನವದೆಹಲಿ: ಕೇಂದ್ರದ ಮೋದಿ ನೇತೃತ್ವದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯ ಅಡಿ ದೇಶದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುತ್ತದೆ. ಆದರೆ, ಇದೀಗ ಈ ಯೋಜನೆ ಕೇವಲ ಬಡವರಿಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ. ಬಡತನ ರೇಖೆಗಿಂತ ಮೇಲೆ ಇರುವವರಿಗೂ ಕೂಡ ಈ ಯೋಜನೆಯ ಲಾಭ ಸಿಗಲಿದೆ. ಈ ಕುರಿತಾದ ಪ್ರಸ್ತಾವನೆಯ ಮೇಲೆ ಸರ್ಕಾರ ತನ್ನ ಮುದ್ರೆ ಒತ್ತಿದೆ.
ಆಯುಷ್ಮಾನ್ ಭಾರತ ಯೋಜನೆಯಡಿ ಸರ್ಕಾರ ದೇಶದ ಸುಮಾರು 10.74 ಕೋಟಿ ಕುಟುಂಬ ಸದಸ್ಯರಿಗೆ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಕ್ಯಾಶ್ ಲೆಸ್ ಕವರ್ ನೀಡುತ್ತದೆ. ನ್ಯಾಷನಲ್ ಹೆಲ್ತ್ ಅಥಾರಿಟಿ ಇದೀಗ ಈ ಯೋಜನೆಯನ್ನು 'The Missing Middle' ಅಂದರೆ ಇದುವರೆಗೆ ಯಾವ ವ್ಯಕ್ತಿಯ ಬಳಿ ಈ ಯೋಜನೆ ತಲುಪಿಲ್ಲವೂ ಅವರ ಬಳಿಗೆ ತಲುಪಿಸಲು ಹಸಿರು ನಿಶಾನೆ ತೋರಿದೆ.
ಆಯುಷ್ಮಾನ್ ಭಾರತ ಯೋಜನೆಯ ಈ ವಿಸ್ತಾರದಿಂದ ಅತಿ ದೊಡ್ಡ ಪ್ರಮಾಣದಲ್ಲಿ ಜನರಿಗೆ ಅಂದರೆ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೂ ಕೂಡ ಇದರ ಲಾಭ ಸಿಗಲಿದೆ. ಸೆಲ್ಫ್ ಎಂಪ್ಲಾಯಿಡ್, ವೃತ್ತಿಪರರು ಅಥವಾ ಸಣ್ಣ-ಪುಟ್ಟ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಜನರು ಇದರಲ್ಲಿ ಶಾಮೀಲಾಗಲಿದ್ದಾರೆ. ಆರಂಭದಲ್ಲಿ 'The Missing Middle' ಪ್ರಾಜೆಕ್ಟ್ ಅನ್ನು ಪ್ರಾಯೋಗಿಕವಾಗಿ ನಡೆಸಿ ಅದರ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.
ಎಲ್ಲ ಆರೋಗ್ಯ ಯೋಜನೆಗಳನ್ನು ಆಯುಶ್ಮಾನ್ ಭಾರತ್ ಗೆ ಸೇರಿಸಲಾಗುವುದು
ಇದಲ್ಲದೆ, ಕೇಂದ್ರದ ಅಸ್ತಿತ್ವದಲ್ಲಿರುವ ಎಲ್ಲಾ ಆರೋಗ್ಯ ಯೋಜನೆಗಳನ್ನು ಆಯುಷ್ಮಾನ್ ಭಾರತ್ - ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಆಯುಷ್ಮಾನ್ ಭಾರತ್-ಪಿಎಂಜೆಎವೈ) ಯಲ್ಲಿ ವಿಲೀನಗೊಳಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಅನುಮೋದನೆ ನೀಡಿದೆ. ಇದರಲ್ಲಿ ಸರ್ಕಾರದ ಖಾಯಂ ಮತ್ತು ಗುತ್ತಿಗೆ ನೌಕರರನ್ನು ಸಹ ಸೇರಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ನಿರ್ಮಾಣ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ರಸ್ತೆ ಅಪಘಾತದಲ್ಲಿ ಗಾಯಗೊಂಡ ರೋಗಿಗಳು, ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ ಕೂಡ ಇದರ ವ್ಯಾಪ್ತಿಗೆ ಬರಲಿದ್ದಾರೆ. ಈ ಯೋಜನೆಗಳ ವಿಲೀನದ ನಂತರ, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿರುವ ಹಲವು ಕೋಟಿ ಜನರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.